ADVERTISEMENT

ಸೈಬರ್‌ ದಾಳಿ ತಡೆಗೆ ಕಠಿಣ ಕ್ರಮ ಅಗತ್ಯ: ತಜ್ಞರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 0:30 IST
Last Updated 31 ಅಕ್ಟೋಬರ್ 2024, 0:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ‘ಭಾರತದ ಮೇಲೆ ಸೈಬರ್ ದಾಳಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸೂಕ್ತ ರೀತಿಯಲ್ಲಿ ಈ ದಾಳಿಗಳನ್ನು ನಿಭಾಯಿಸಲು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಪ್ರಹಾರ್ ಸಿದ್ಧಪಡಿಸಿದ ‘ದಿ ಇನ್‌ವಿಸಿಬಲ್ ಹ್ಯಾಂಡ್’ ಎಂಬ ವರದಿ ಬಿಡುಗಡೆಯ ಕಾರ್ಯಕ್ರಮದಲ್ಲಿ ತಜ್ಞರು ಸೈಬರ್ ದಾಳಿ ಕುರಿತು ಸಂವಾದ ನಡೆಸಿದರು. ಈ ವರದಿಯು ಈಗಲೇ ಸೈಬರ್‌ ದಾಳಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೆ ಸಾರ್ವಜನಿಕರಿಗೆ ಅಪಾಯ ತಂದೊಡ್ಡಬಹುದಾದ ಸಾರ್ವಜನಿಕ ಕ್ಷೇತ್ರದಲ್ಲಿನ ಸೈಬರ್ ದಾಳಿ  ಕುರಿತು ವಿವರವಾದ ಮಾಹಿತಿ ಒಳಗೊಂಡಿದೆ.

ಪ್ರಹಾರ್ ಸಂಸ್ಥೆಯ ಅಂಕಿ–ಅಂಶದ ಪ್ರಕಾರ 2033ರ ವೇಳೆಗೆ ಭಾರತವು ವಾರ್ಷಿಕವಾಗಿ ಸುಮಾರು 1 ಲಕ್ಷ ಕೋಟಿ (ಒಂದು ಟ್ರಿಲಿಯನ್) ಸೈಬರ್ ದಾಳಿಗಳನ್ನು ಎದುರಿಸಲಿದೆ. 2047ರ ವೇಳೆಗೆ ಸೈಬರ್ ದಾಳಿಗಳ ಸಂಖ್ಯೆ 17 ಲಕ್ಷ ಕೋಟಿಗೆ (17 ಟ್ರಿಲಿಯನ್‌) ಏರಿಕೆಯಾಗುವ ನಿರೀಕ್ಷೆಯಿದೆ. ಈ ವರದಿಯು ಸೈಬರ್ ದಾಳಿಗಳಿಂದ ದೇಶವನ್ನು ರಕ್ಷಿಸಲು ದೊಡ್ಡ ಪ್ರಮಾಣದ, ದೃಢವಾದ ಸೈಬರ್ ರಕ್ಷಣಾ ಉಪಕರಣಗಳು ಅಗತ್ಯವಿದೆ ಎಂದು ಹೇಳಿದೆ.

ADVERTISEMENT

2023ರಲ್ಲಿ ದೇಶವು 7.9 ಕೋಟಿ (79 ಮಿಲಿಯನ್) ಸೈಬರ್ ದಾಳಿಗಳನ್ನು ಎದುರಿಸಿದೆ. ಸಂಖ್ಯೆಗಳ ಆಧಾರದಲ್ಲಿ ಅತಿಹೆಚ್ಚು ಸೈಬರ್ ದಾಳಿ ಎದುರಿಸಿದ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಈ ಸಂಖ್ಯೆಯು ಅದಕ್ಕಿಂತ ಹಿಂದಿನ ವರ್ಷಕ್ಕಿಂತ ಶೇ 15ರಷ್ಟು ಹೆಚ್ಚಳವಾಗಿದೆ. 2024ರಲ್ಲಿ ಮತ್ತಷ್ಟು ಹೆಚ್ಚಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 50 ಕೋಟಿ (500 ಮಿಲಿಯನ್) ಸೈಬರ್ ದಾಳಿ ಪ್ರಕರಣಗಳು ನಡೆದಿವೆ ಎಂದು ವರದಿ ತಿಳಿಸಿದೆ.

‘ಸೈಬರ್ ದಾಳಿಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ಸಾಂಪ್ರದಾಯಿಕ ಹ್ಯಾಕರ್‌ಗಳು ಮಾಡುವ ದಾಳಿ. ಅವರು ವ್ಯವಸ್ಥೆಗಳಲ್ಲಿನ ದೌರ್ಬಲ್ಯವನ್ನು ಹಣ ಗಳಿಸಿಕೊಳ್ಳಲು ಅಥವಾ ವ್ಯವಸ್ಥೆಗೆ ಅಡ್ಡಿಪಡಿಸಲು ಬಳಸಿಕೊಳ್ಳುತ್ತಾರೆ. ಎರಡನೆಯದು ಹೆಚ್ಚು ಅಪಾಯಕಾರಿ. ಅವರು ದೇಶದ ನಾಗರಿಕರನ್ನು ಗುರಿಯಾಗಿಸುತ್ತಾರೆ. ಮುಗ್ಧರನ್ನು ಮರುಳುಗೊಳಿಸುವ ಮೂಲಕ, ಬೆದರಿಕೆ ಸಂದೇಶದ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುತ್ತಾರೆ. ಇಂತಹ ತಂತ್ರಗಳನ್ನು ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ’ ಎಂದು ಪ್ರಹಾರ್ ಸಂಸ್ಥೆಯ ರಾಷ್ಟ್ರೀಯ ಸಂಚಾಲಕ ಮತ್ತು ಅಧ್ಯಕ್ಷ ಅಭಯ್ ಮಿಶ್ರಾ ತಿಳಿಸಿದ್ದಾರೆ.

‘ಯುವಕರು ಅಕ್ರಮ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಬಲಿಯಾಗುವುದನ್ನು ತಡೆಯುವಂತೆ ಮಾಡಬೇಕಾದುದು ಈ ಕ್ಷಣದ ತುರ್ತಾಗಿದೆ’ ಎಂದು ಸೈಬರ್ ಅಪರಾಧ ಮತ್ತು ಸೈಬರ್ ಕಾನೂನಿನ ಸಂಶೋಧನಾ ಕೇಂದ್ರದ ಅಧ್ಯಕ್ಷ ಅನುಜ್ ಅಗರ್ವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.