ನವದೆಹಲಿ: ದೇಶದ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಮಾರುಕಟ್ಟೆ ವರ್ಷದ ನಾಲ್ಕು ತಿಂಗಳಲ್ಲಿ (ಅಕ್ಟೋಬರ್–ಜನವರಿ) 1.76 ಕೋಟಿ ಟನ್ ಸಕ್ಕರೆ ಉತ್ಪಾದಿಸಿವೆ.
ಹಿಂದಿನ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 1.41 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಈ ಬಾರಿ ಶೇ 25.37ರಷ್ಟು ಹೆಚ್ಚು ಉತ್ಪಾದನೆ ಆಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಮಾಹಿತಿ ನೀಡಿದೆ.
2019–20ನೇ ಮಾರುಕಟ್ಟೆ ವರ್ಷದಲ್ಲಿ 2.74 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. 2020–21ರಲ್ಲಿ 3.02 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಲಿದೆ ಎಂದು ಐಎಸ್‌ಎಂಎ ಹೇಳಿದೆ.
ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಜನವರಿಯಲ್ಲಿ 54.4 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿದೆ. 2020ರ ಜನವರಿಯಲ್ಲಿ 54.9 ಲಕ್ಷ ಟನ್‌ಗಳಷ್ಟು ಇತ್ತು. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ 34.6 ಲಕ್ಷ ಟನ್‌ಗಳಿಂದ 63.8 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ.
ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಉತ್ಪಾದನೆ 27.9 ಲಕ್ಷ ಟನ್‌ಗಳಿಂದ 34.3 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ.
ಉದ್ಯಮ ಮತ್ತು ಕಬ್ಬು ಬೆಳೆಗಾರರಿಗೆ ಹಣಕಾಸಿನ ನೆರವು ನೀಡುವ ದೃಷ್ಟಿಯಿಂದ ಸರ್ಕಾರವು ಬಜೆಟ್‌ನಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಸಂಘವು ಸ್ವಾಗತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.