ನವದೆಹಲಿ: ಪ್ರಸಕ್ತ ವರ್ಷದಲ್ಲಿ ಡಿಸೆಂಬರ್ 15ರವರೆಗಿನ ಮಾಹಿತಿಯ ಪ್ರಕಾರ ಸಕ್ಕರೆ ಉತ್ಪಾದನೆ ಶೇಕಡ 61ರಷ್ಟು ಹೆಚ್ಚಾಗಿದ್ದು 73.77 ಲಕ್ಷ ಟನ್‌ಗಳಿಗೆ ತಲುಪಿದೆ.
ಈ ಬಾರಿ ಕಬ್ಬು ಇಳುವರಿ ಹೆಚ್ಚಾಗಿದೆ. ಇದರ ಜತೆಗೆ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವ ಕಾರ್ಯ ಬೇಗನೆ ಆರಂಭವಾಗಿರುವುದರಿಂದ ಉತ್ಪಾದನೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ತಿಳಿಸಿದೆ. ಹಿಂದಿನ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 45.81 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು.
ಸಕ್ಕರೆ ಉತ್ಪಾದನೆಯುಮಹಾರಾಷ್ಟ್ರದಲ್ಲಿ ಶೇ 7.66 ಲಕ್ಷ ಟನ್‌ಗಳಿಂದ 26.96 ಲಕ್ಷ ಟನ್‌ಗಳಿಗೆ ಹಾಗೂ ಉತ್ತರ ಪ್ರದೇಶದಲ್ಲಿ 21.25 ಲಕ್ಷ ಟನ್‌ಗಳಿಂದ 22.60 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ 10.62 ಲಕ್ಷ ಟನ್‌ಗಳಿಂದ 16.65 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ.
2020ರ ಅಕ್ಟೋಬರ್ 1ರಿಂದ ಇಲ್ಲಿಯವರೆಗೆ ಪ್ರಸಕ್ತ ಅವಧಿಯಲ್ಲಿ 2.5 ಲಕ್ಷ ಟನ್‌ಗಳಿಂದ 3 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತು ಮಾಡಿರುವುದಾಗಿ ವ್ಯಾಪಾರಿಗಳ ಮತ್ತು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
‘ಎಂಎಸ್‌ಪಿ ಹೆಚ್ಚಿಸಿ’: ಸಕ್ಕರೆ ಮೇಲಿನ ಕನಿಷ್ಠ ಮಾರಾಟ ದರ (ಎಂಎಸ್‌ಪಿ) ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವುದನ್ನು ಎದುರು ನೋಡುತ್ತಿರುವುದಾಗಿ ಸಂಘವು ಹೇಳಿದೆ. ಬಹುತೇಕ ಎರಡು ವರ್ಷಗಳ ಹಿಂದೆ ಎಂಎಸ್‌ಪಿ ಪರಿಷ್ಕರಣೆ ಮಾಡಲಾಗಿತ್ತು. ಹೀಗಾಗಿ ಎಂಎಸ್‌ಪಿಯನ್ನು ಪ್ರತಿ ಕೆ.ಜಿಗೆ ₹ 34.50ಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಸದ್ಯ, ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಬಾಕಿ ಮೊತ್ತ ₹ 3,500 ಕೋಟಿ ಇದೆ. ಎಂಎಸ್‌ಪಿಯನ್ನು ತಕ್ಷಣವೇ ಹೆಚ್ಚಿಸದೇ ಇದ್ದರೆ ಬಾಕಿ ಮೊತ್ತದಲ್ಲಿ ಏರಿಕೆ ಆಗಲಿದೆ ಎಂದು ಅದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.