ADVERTISEMENT

ಮಳೆ ಕೊರತೆಯಿಂದ ಕಬ್ಬು ಇಳುವರಿ ಕುಂಠಿತ: ಸಕ್ಕರೆ ಉತ್ಪಾದನೆ ಶೇ 40 ಕುಸಿತ?

ಶ್ರೀಕಾಂತ ಕಲ್ಲಮ್ಮನವರ
Published 11 ನವೆಂಬರ್ 2023, 23:30 IST
Last Updated 11 ನವೆಂಬರ್ 2023, 23:30 IST
ಸಕ್ಕರೆ
ಸಕ್ಕರೆ   

ಹುಬ್ಬಳ್ಳಿ: ಮಳೆ ಕೊರತೆಯಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಪರಿಣಾಮವಾಗಿ, ಸಕ್ಕರೆ ಉತ್ಪಾದನೆಯೂ ಕಡಿಮೆ ಆಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂದಾಜು ಶೇ 40ರಷ್ಟು ಸಕ್ಕರೆ ಉತ್ಪಾದನೆ ಖೋತಾ ಆಗಬಹುದು.

ಕಬ್ಬು ಅರೆಯುವ ಕಾರ್ಯ ಅಲ್ಲಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಈಗಾಗಲೇ ಆರಂಭವಾಗಿದೆ. 35.20 ಲಕ್ಷ ಕ್ವಿಂಟಲ್‌ ಸಕ್ಕರೆ ಉತ್ಪಾದಿಸುವ ನಿರೀಕ್ಷೆ ಇದೆ. ಕಳೆದ ವರ್ಷ 59.52 ಲಕ್ಷ ಕ್ವಿಂಟಲ್‌ ಸಕ್ಕರೆ ಉತ್ಪಾದಿಸಲಾಗಿತ್ತು ಎಂದು ಸಕ್ಕರೆ ಇಲಾಖೆ ಮೂಲಗಳು ತಿಳಿಸಿವೆ.

ಕಬ್ಬು ಕುಂಠಿತ: ಕಳೆದ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ 620 ಲಕ್ಷ ಟನ್‌ ಕಬ್ಬು ಬೆಳೆಯಲಾಗಿತ್ತು. ಈ ವರ್ಷ ಜೂನ್‌–ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಿದ್ದರಿಂದ ಆತಂಕಗೊಂಡ ನೂರಾರು ರೈತರು ಕಬ್ಬು ಬೆಳೆಯಲಿಲ್ಲ. ಇದರ ಪರಿಣಾಮ  440 ಲಕ್ಷ ಟನ್‌ದಿಂದ 450 ಲಕ್ಷ ಟನ್‌ವರೆಗೆ ಮಾತ್ರ ಕಬ್ಬು ಉತ್ಪಾದನೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 26ರಿಂದ ಶೇ 29ರಷ್ಟು ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.  

ADVERTISEMENT

‘ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ವಿವಿಧೆಡೆ ಕಬ್ಬು ಬೆಳೆಯುವ ಪ್ರದೇಶ ಕೂಡ ಕಡಿಮೆಯಾಗಿದೆ. ಕಳೆದ ವರ್ಷ 7.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಈ ವರ್ಷ ಒಟ್ಟು 6.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 15ರಷ್ಟು ಪ್ರದೇಶ ಕಡಿಮೆಯಾಗಿದೆ’ ಎಂದು ಸಕ್ಕರೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಇಳುವರಿಯೂ ಕಡಿಮೆ: ‘ನೀರಿನ ಕೊರತೆಯಿಂದ ಹಲವೆಡೆ ಕಬ್ಬು ಸಮೃದ್ಧವಾಗಿ ಬೆಳೆದಿಲ್ಲ. ಬಹಳ ಕಡೆ ಒಣಗಿದ ಕಬ್ಬು ಇದೆ. ಗುಣಮಟ್ಟದ ಕಬ್ಬು ಇಲ್ಲ. ಹೀಗಾಗಿ ಇಳುವರಿ ಕಡಿಮೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಶೇ 11ರಷ್ಟು ಇಳುವರಿ ಬಂದಿತ್ತು. ಈ ಸಲ ಶೇ 9ರಿಂದ ಶೇ 10ರಷ್ಟು ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ಕಬ್ಬು ಬೆಳೆಗಾರರು ತಿಳಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಬ್ಬು ಕಡಿಮೆ ಇದೆ. ಕಳೆದ ವರ್ಷ ನಮ್ಮ ಕಾರ್ಖಾನೆಯೊಂದರಲ್ಲೇ 6.25 ಲಕ್ಷ ಟನ್‌ ಸಕ್ಕರೆ ನುರಿಸಲಾಗಿತ್ತು. ಈ ವರ್ಷ ಶೇ 25ರಿಂದ ಶೇ 30ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು  ಬೆಳಗಾವಿ ಜಿಲ್ಲೆಯ ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.