ನವದೆಹಲಿ: ಜೆಟ್ ಏರ್‌ವೇಸ್ ಕಂಪನಿಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು, ಈ ತೀರ್ಪು ಪ್ರಕಟಿಸಿದೆ.
ನರೇಶ್ ಗೋಯಲ್ ಅವರು ಸ್ಥಾಪಿಸಿದ ಈ ವಿಮಾನಯಾನ ಕಂಪನಿಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರಿಂದ 2019ರಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಅತಿಹೆಚ್ಚು ಸಾಲ ನೀಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್‌ಬಿಐ) ಕಂಪನಿ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮುಂಬೈ ಶಾಖೆಯಲ್ಲಿ ದಿವಾಳಿ ಪ್ರಕ್ರಿಯೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು.
2021ರಲ್ಲಿ ಜಲನ್ ಕಲ್ರಾಕ್ ಕನ್ಸೋರ್ಟಿಯಂ ಕಂಪನಿಯು (ಜೆಕೆಸಿ) ಈ ವಿಮಾನಯಾನ ಕಂಪನಿಯ ಖರೀದಿಗೆ ಬಿಡ್ ಸಲ್ಲಿಸಿತ್ತು. ನಿಗದಿತ ಅವಧಿಯೊಳಗೆ ಸಾಲಗಾರರಿಗೆ ಬಾಕಿ ಹಣ ಪಾವತಿಸಬೇಕು ಎಂಬ ಷರತ್ತಿನೊಂದಿಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಇದಕ್ಕೆ ಒಪ್ಪಿಗೆ ನೀಡಿತ್ತು.
ಆದರೆ, ಜೆಕೆಸಿಯು ಹಣ ಪಾವತಿಸುವಲ್ಲಿ ವಿಫಲವಾಗಿದ್ದರಿಂದ ಜೆಟ್ ಏರ್‌ವೇಸ್‌ನ ಆಸ್ತಿಗಳನ್ನು ಮಾರಾಟ ಮಾಡಿ ಕಂಪನಿಯನ್ನು ಸಮಾಪ್ತಿಗೊಳಿಸಲು ನ್ಯಾಯಪೀಠ ಸೂಚಿಸಿದೆ.
ದೇಶದಲ್ಲಿ 25 ವರ್ಷದವರೆಗೆ ಸೇವೆ ನೀಡಿದ್ದ ಈ ವಿಮಾನಯಾನ ಕಂಪನಿಯಲ್ಲಿ 1,300 ಪೈಲಟ್‌ಗಳು ಮತ್ತು 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದರು. ಉದ್ಯೋಗಿಗಳ ಸಂಬಳ ಮತ್ತು ಬ್ಯಾಂಕ್‌ಗಳ ಸಾಲ ಬಾಕಿ ಮೊತ್ತ ₹8,500 ಕೋಟಿಗೂ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.