ADVERTISEMENT

ಸ್ವಿಸ್‌ ಬ್ಯಾಂಕ್‌: ಭಾರತೀಯರ ಠೇವಣಿ ಇಳಿಕೆ

ಪಿಟಿಐ
Published 20 ಜೂನ್ 2024, 15:39 IST
Last Updated 20 ಜೂನ್ 2024, 15:39 IST
..........
..........   

ನವದೆಹಲಿ/ ಜೂರಿಚ್‌: ಭಾರತೀಯರು ಹಾಗೂ ಸಂಸ್ಥೆಗಳು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ ಪ್ರಮಾಣವು 2023ರಲ್ಲಿ ಶೇ 70ರಷ್ಟು ಕಡಿಮೆಯಾಗಿದೆ ಎಂದು ಸ್ವಿಡ್ಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ. 

ಸ್ವಿಸ್‌ ಬ್ಯಾಂಕ್‌ನ ಸ್ಥಳೀಯ ಶಾಖೆಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸದ್ಯ ಒಟ್ಟು ₹9,771 ಕೋಟಿಯಿದ್ದು, ಇದು ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾಗಿದೆ ಎಂದು ಗುರುವಾರ ಬಿಡುಗಡೆಯಾಗಿರುವ ಬ್ಯಾಂಕ್‌ನ ವರದಿ ಹೇಳಿದೆ. 

2021ರಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಪ್ರಮಾಣವು 14 ವರ್ಷಗಳ ಗರಿಷ್ಠ ಮಟ್ಟವಾದ ₹30,500 ಕೋಟಿ ಇತ್ತು. ಭಾರತೀಯರು ಜಮೆ ಮಾಡಿರುವ ಹಣದ ಮೊತ್ತವು ಸತತ ಎರಡು ವರ್ಷಗಳಿಂದ ಕಡಿಮೆಯಾಗುತ್ತಿದೆ. ಬಾಂಡ್‌ಗಳು, ಷೇರುಗಳು ಸೇರಿ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮೊತ್ತದಲ್ಲಿ ಭಾರಿ ಇಳಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯ ಉದ್ಯಮಿಗಳು, ರಾಜಕಾರಣಿಗಳು ಅಪಾರ ಪ್ರಮಾಣದಲ್ಲಿ ‘ಕಪ್ಪು ಹಣ’ ಇಟ್ಟಿದ್ದಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.

ಆದರೆ, ಈ ಮೊತ್ತವು ಅಲ್ಲಿನ ಬ್ಯಾಂಕ್‌ಗಳು ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ಗೆ (ಎಸ್‌ಎನ್‌ಬಿ) ನೀಡಿರುವ ಅಧಿಕೃತ ಮಾಹಿತಿಯಾಗಿದೆ. ಈ ಮೊತ್ತವು ಭಾರತೀಯರ ‘ಕಪ್ಪು ಹಣ’ ಕುರಿತ ಮಾಹಿತಿಯಲ್ಲ. 

ಅಲ್ಲದೆ ಭಾರತೀಯರು, ಅನಿವಾಸಿ ಭಾರತೀಯರು ಅಥವಾ ಇತರರು ಮೂರನೇ ರಾಷ್ಟ್ರದ ಸಂಸ್ಥೆಗಳ ಹೆಸರಿನಲ್ಲಿ ಠೇವಣಿ ಇರಿಸಿರುವ ವಿವರವನ್ನು ಈ ಅಂಕಿಅಂಶಗಳು ಒಳಗೊಂಡಿಲ್ಲ.

2006ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಮೊತ್ತ ₹61 ಸಾವಿರ ಕೋಟಿ ಇತ್ತು. ಇದು ಗರಿಷ್ಠ ಮೊತ್ತವಾಗಿತ್ತು. ಆ ನಂತರದ ವರ್ಷಗಳಲ್ಲಿ ಇದರ ಪ್ರಮಾಣ ಇಳಿಕೆಯಾಗಿದೆ ಎಂದು ಎಸ್‌ಎನ್‌ಬಿ ಅಂಕಿಅಂಶ ತಿಳಿಸಿವೆ.

2019 ಮತ್ತು 2020ರಲ್ಲಿ ಠೇವಣಿ ಮೊತ್ತ ಗಣನೀಯ ಪ್ರಮಾಣದಲ್ಲಿ ಕುಗ್ಗಿದೆ. ಆದರೆ, 2021ರಲ್ಲಿ ಏರಿಕೆಯಾಗಿತ್ತು. 2022ರಲ್ಲಿ ಕೆಲವು ನಂಬಿಕಸ್ಥರ ಉಳಿತಾಯ ಖಾತೆಗಳಲ್ಲಿನ ಠೇವಣಿ ಮೊತ್ತದಲ್ಲಷ್ಟೇ ಏರಿಕೆಯಾಗಿದೆ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.