ADVERTISEMENT

ಹುಣಸೆ ಹಣ್ಣು ಇಳುವರಿ ಕುಸಿತ?

ತುಮಕೂರು: ಒಂದು ಕ್ವಿಂಟಲ್‌ಗೆ ₹12 ಸಾವಿರದಿಂದ ₹24 ಸಾವಿರ ಧಾರಣೆ

ಕೆ.ಎಚ್.ಓಬಳೇಶ್
Published 27 ಜನವರಿ 2024, 23:04 IST
Last Updated 27 ಜನವರಿ 2024, 23:04 IST
ಹುಣಸೆ ಹಣ್ಣು
ಹುಣಸೆ ಹಣ್ಣು   

ಬೆಂಗಳೂರು: ಪ್ರಸಕ್ತ ಮಾರುಕಟ್ಟೆ ಋತುವಿನ ಆರಂಭದಲ್ಲಿಯೇ ಹುಣಸೆ ಹಣ್ಣಿಗೆ ಉತ್ತಮ ಧಾರಣೆಯಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಹಣ್ಣಿನ ತಿರುಳಿನ ದಪ್ಪ ಕಡಿಮೆ ಇರುವುದರಿಂದ ರೈತರಿಗೆ ಇಳುವರಿ ಕುಸಿತದ ಆತಂಕ ಎದುರಾಗಿದೆ.

ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಅತಿಹೆಚ್ಚು ಹುಣಸೆ ಹಣ್ಣು ಉತ್ಪಾದನೆಯಾಗುತ್ತದೆ. ಪ್ರಮುಖವಾಗಿ ಈ ಜಿಲ್ಲೆಯ ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕಿನ ನೂರಾರು ಎಕರೆ ಪ್ರದೇಶದಲ್ಲಿ ಹುಣಸೆ ಗಿಡಗಳಿವೆ.

ಆದರೆ, ಕಳೆದ ಮುಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿಯಲಿಲ್ಲ. ಇದು ಇಳುವರಿ ಕುಸಿತಕ್ಕೆ ಕಾರಣವಾಗಿದ್ದು, ಬೆಳೆಗಾರರಿಗೆ ನಷ್ಟವಾಗುವ ಆತಂಕ ಕಾಡುತ್ತಿದೆ.

ADVERTISEMENT

‘ಮಳೆ ಕೊರತೆಯಿಂದಾಗಿ ಹುಣಸೆ ಮರಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಕಾಯಿಗಳಿವೆ. ಮರದಿಂದ ಹಣ್ಣು ಕಿತ್ತು ಸಿಪ್ಪೆ, ಬೀಜ, ನಾರು ಬೇರ್ಪಡಿಸಿ ಮಾರುಕಟ್ಟೆಗೆ ತರಲು ರೈತರಿಗೆ ಒಂದು ಕ್ವಿಂಟಲ್‌ಗೆ ₹5 ಸಾವಿರದಿಂದ ₹6 ಸಾವಿರ ಖರ್ಚಾಗುತ್ತದೆ. ಕಳೆದ ವರ್ಷ 5ರಿಂದ 6 ಚೀಲದಷ್ಟು ಹಣ್ಣಾದ ಹುಣಸೆ ಕಾಯಿಗಳನ್ನು ಸಂಸ್ಕರಿಸಿದರೆ ಒಂದು ಕ್ವಿಂಟಲ್‌ ಹಣ್ಣು ದೊರೆಯುತ್ತಿತ್ತು. ಈ ಬಾರಿ 9ರಿಂದ 10 ಚೀಲಕ್ಕೆ ಒಂದು ಕ್ವಿಂಟಲ್‌ ಹಣ್ಣು ಸಿಗುತ್ತಿದೆ’ ಎನ್ನುತ್ತಾರೆ ವರ್ತಕ ರಮೇಶ್‌. 

ಸದ್ಯ ತುಮಕೂರು ಎಪಿಎಂಸಿಯಲ್ಲಿ ಹುಣಸೆ ಹಣ್ಣು ವಹಿವಾಟು ಆರಂಭಗೊಂಡಿದ್ದು, ಮೇ ತಿಂಗಳವರೆಗೂ ನಡೆಯಲಿದೆ. ಇಲ್ಲಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಅಲ್ಲಿನ ಖರೀದಿದಾರರು ನೇರವಾಗಿ ಎಪಿಎಂಸಿಗೆ ಬಂದು ಖರೀದಿಸುತ್ತಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಧಾರಣೆಯಲ್ಲೂ ಅಷ್ಟೇನು ವ್ಯತ್ಯಾಸವಾಗಿಲ್ಲ. ಮಾರುಕಟ್ಟೆಯಲ್ಲಿ ಸೋಮವಾರ ಮತ್ತು ಗುರುವಾರ ಹರಾಜು ನಡೆಯುತ್ತದೆ. ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಹಣ್ಣಿನ ಪೂರೈಕೆ ಹೆಚ್ಚಿರುತ್ತದೆ. ಆ ವೇಳೆ ರಜಾ ದಿನ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿಯೂ ವಹಿವಾಟು ನಡೆಯುತ್ತದೆ ಎನ್ನುತ್ತಾರೆ ವರ್ತಕರು.

ಸದ್ಯ ಒಂದು ಕ್ವಿಂಟಲ್‌ ಹುಣಸೆ ಹಣ್ಣಿಗೆ ₹12 ಸಾವಿರದಿಂದ ₹24 ಸಾವಿರದವರೆಗೆ ಬೆಲೆ ಇದೆ. ಹಣ್ಣಿನ ಗುಣಮಟ್ಟದ ಆಧಾರದ ಮೇಲೆ ಧಾರಣೆಯಲ್ಲಿ ಏರಿಳಿತವಾಗುತ್ತದೆ ಎಂಬುದು ಅವರ ವಿವರಣೆ. 

ಹುಣಸೆ ಹಣ್ಣು

ಶೈತ್ಯಾಗಾರ ನಿರ್ಮಾಣಕ್ಕೆ ಸಿದ್ಧತೆ

ತುಮಕೂರು ಎಪಿಎಂಸಿಯು ರಾಜ್ಯದ ಅತಿದೊಡ್ಡ ಹುಣಸೆ ಹಣ್ಣು ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ, ಇಲ್ಲಿ ಸುಸಜ್ಜಿತ ಶೈತ್ಯಾಗಾರ (ಕೋಲ್ಡ್‌ ಸ್ಟೋರೇಜ್‌) ಇಲ್ಲ. ಇದರ ನಿರ್ಮಾಣ ಸಂಬಂಧ ಸರ್ಕಾರಕ್ಕೂ ಯಾವುದೇ ಪ್ರಸ್ತಾವ ಸಲ್ಲಿಕೆಯಾಗಿಲ್ಲ.

ಶೈತ್ಯಾಗಾರ ಇದ್ದರೆ ಬೆಲೆ ಕುಸಿತದ ಸಂದರ್ಭದಲ್ಲಿ ಹುಣಸೆ ಹಣ್ಣನ್ನು ದೀರ್ಘಕಾಲದವರೆಗೆ ಕಾಪಿಟ್ಟು ಧಾರಣೆ ಏರಿಕೆಯಾದಾಗ ಮಾರಾಟ ಮಾಡಿದರೆ ಲಾಭ ಸಿಗುತ್ತದೆ. ಹಾಗಾಗಿ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂಬುದು ಬೆಳೆಗಾರರ ಒತ್ತಾಯ.

ಸದ್ಯ ಜಿಲ್ಲೆಯ ದೊಡ್ಡ ಬೆಳೆಗಾರರು ಮತ್ತು ವರ್ತಕರು ಇಲ್ಲಿ ಬೆಳೆದ ಹಣ್ಣನ್ನು ನೆರೆಯ ಆಂಧ್ರಪ್ರದೇಶದ ಮಡಕಶಿರಾ ಮತ್ತು ಹಿಂದೂಪುರದಲ್ಲಿ ಇರುವ ಕೋಲ್ಡ್‌ ಸ್ಟೋರೇಜ್‌ಗಳಲ್ಲಿಟ್ಟು ಮಾರಾಟ ಮಾಡುತ್ತಾರೆ.

‘ಜಿಲ್ಲೆಯ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಸಂಬಂಧ ಶೈತ್ಯಾಗಾರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇತ್ತೀಚೆಗೆ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆಯಲ್ಲೂ ಈ ಕುರಿತು ಚರ್ಚಿಸಲಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಶೈತ್ಯಾಗಾರ ನಿರ್ಮಾಣಕ್ಕೆ ಕನಿಷ್ಠ 10 ಸಾವಿರ ಚದರ ಅಡಿಯಷ್ಟು ನಿವೇಶನ ಬೇಕಿದೆ. ಸಮಿತಿ ವ್ಯಾಪ್ತಿಯಲ್ಲಿ ಅಷ್ಟು ವಿಸ್ತೀರ್ಣದ ನಿವೇಶನವಿಲ್ಲ. ಸೂಕ್ತ ಸ್ಥಳದ ಹುಡುಕಾಟ ನಡೆದಿದೆ. ಮುಂದಿನ ತಿಂಗಳೊಳಗೆ ಇದಕ್ಕೆ ಕಾರ್ಯರೂಪ ನೀಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.