ADVERTISEMENT

ಟಾಟಾ ಸಮೂಹದಿಂದ ಭಾರತದಲ್ಲಿ ಐಫೋನ್ ತಯಾರಿಕೆ: ಸಚಿವ ರಾಜೀವ್ ಚಂದ್ರಶೇಖರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2023, 12:42 IST
Last Updated 27 ಅಕ್ಟೋಬರ್ 2023, 12:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ‘ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗೆ ಆ್ಯಪಲ್‌ ಕಂಪನಿಯ ಐಫೋನ್‌ಗಳನ್ನು ಟಾಟಾ ಸಮೂಹ ಉತ್ಪಾದಿಸಲಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು, ‘ಉತ್ಪಾದನಾ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳುತ್ತಿದೆ. ಈ ಹಿಂದೆ ಚೀನಾ ತಯಾರಿಸಿದ ಆ್ಯಪಲ್ ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದ ಆ್ಯಪಲ್ ಕಂಪನಿ ತನ್ನ ನಿರ್ಧಾರವನ್ನು ಬದಲಿಸಿದೆ. ಅದು ಈಗ ಕಾಣಿಸುತ್ತಿದೆ’ ಎಂದಿದ್ದಾರೆ.

ADVERTISEMENT

ಪ್ರಧಾನಮಂತ್ರಿ ಅವರ ಮೇಕ್‌ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಕಂಪನಿಯೊಂದು ಜಾಗತಿಕ ಮಾರುಕಟ್ಟೆಗಾಗಿ ತನ್ನ ಉತ್ಪನ್ನಗಳ ತಯಾರಿಕೆಗೆ ಭಾರತದ ಮೇಲೆ ಭರವಸೆ ಇಟ್ಟಿರುವುದು ಸಂತಸ ತಂದಿದೆ. ಇದಕ್ಕೆ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು’ ಎಂದಿದ್ದಾರೆ.

ಆ್ಯಪಲ್‌ನ ಪ್ರಮುಖ ಪೂರೈಕೆದಾರ ಕಂಪನಿ ವಿಸ್ಟ್ರಾನ್‌ ಕಾರ್ಪೊರೇಷನ್‌ ಖರೀದಿ ಕುರಿತಂತೆ ಆಡಳಿತ ಮಂಡಳಿ ಸಭೆ ನಡೆಸಿದ್ದು, ಅದರ ನಿರ್ಣಯದ ಪ್ರತಿಯನ್ನು ಸಚಿವ ಚಂದ್ರಶೇಖರ್‌ ಹಂಚಿಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಜಾಗತಿಕ ಮಾರುಕಟ್ಟೆಗೆ ಭಾರತವು ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಮತ್ತು ರಫ್ತು ಕ್ಷೇತ್ರದಲ್ಲಿ ಅತ್ಯಂತ ವಿಶ್ವಾಸಾರ್ಹ ಹಾಗೂ ಪ್ರಮುಖ ಕೇಂದ್ರವಾಗಿದೆ’ ಎಂದಿದ್ದಾರೆ.

155 ವರ್ಷಗಳ ಇತಿಹಾಸ ಇರುವ ಟಾಟಾ ಸಮೂಹವು ಉಪ್ಪಿನಿಂದ ತಂತ್ರಜ್ಞಾನದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಇ–ಕಾಮರ್ಸ್‌ ಕ್ಷೇತ್ರಗಳಲ್ಲೂ ಕಳೆದ ಕೆಲವು ವರ್ಷಗಳಿಂದ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಕಂಪನಿಯು ತಮಿಳುನಾಡಿನಲ್ಲಿರುವ ತನ್ನ ಘಟಕದಲ್ಲಿ ಈಗಾಗಲೇ ಐಫೋನ್‌ನ ಕವಚವನ್ನು ಸಿದ್ಧಪಡಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.