ADVERTISEMENT

ಬಂಡವಾಳ ವೃದ್ಧಿ ತೆರಿಗೆ ಬಿಸಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 19:50 IST
Last Updated 23 ಜುಲೈ 2024, 19:50 IST
   

ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಡಿಮ್ಯಾಟ್‌ ಖಾತೆಯಲ್ಲಿ ಹೂಡಿಕೆದಾರರು ಇರಿಸಿಕೊಂಡ ಷೇರುಗಳನ್ನು ಮಾರಾಟ ಮಾಡಿದ ಬಳಿಕ ಬರುವ ಲಾಭಕ್ಕೆ ವಿಧಿಸುವ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆಯನ್ನು (ಎಲ್‌ಟಿಸಿಜಿ) ಶೇ 10ರಿಂದ ಶೇ 12.5ಕ್ಕೆ ಏರಿಕೆ ಮಾಡಲಾಗಿದೆ.

ಕರೆನ್ಸಿ ಮತ್ತು ಚಿನ್ನ ಮಾರಾಟಕ್ಕೂ ಈ ತೆರಿಗೆ ಅನ್ವಯಿಸಲಿದೆ. ಅಲ್ಲದೆ, ತೆರಿಗೆ ವಿನಾಯಿತಿ ಪಡೆಯುವ ಮೊತ್ತವನ್ನು ₹1 ಲಕ್ಷದಿಂದ ₹1.25 ಲಕ್ಷಕ್ಕೆ ಹೆಚ್ಚಿಸಲಾಗಿದೆ.  

ಅಲ್ಪಕಾಲದ ಬಂಡವಾಳ ವೃದ್ಧಿ ತೆರಿಗೆಯನ್ನು ಶೇ 15ರಿಂದ ಶೇ 20ಕ್ಕೆ ಏರಿಕೆ ಮಾಡಲಾಗಿದೆ. ಷೇರು ವಹಿವಾಟು ತೆರಿಗೆಯನ್ನು (ಎಸ್‌ಟಿಟಿ) ಶೇ 0.01ರಿಂದ ಶೇ 0.02ಕ್ಕೆ ಹೆಚ್ಚಿಸಲಾಗಿದೆ.

ADVERTISEMENT

‘ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಬಂಡವಾಳ ವೃದ್ಧಿ ತೆರಿಗೆಯಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹15,000 ಕೋಟಿ ಸಂಗ್ರಹವಾಗಲಿದೆ’ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಎನ್‌ಪಿಎಸ್‌ ವಾತ್ಸಲ್ಯ: 

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಮಕ್ಕಳಿಗೆ ಹೊಸದಾಗಿ ಎನ್‌ಪಿಎಸ್‌ ವಾತ್ಸಲ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಪೋಷಕರು ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಬಹುದಾಗಿದೆ. ಆ ಮಗುವಿಗೆ 18 ವರ್ಷ ತುಂಬಿದ ಬಳಿಕ ಸಾಮಾನ್ಯ ರಾಷ್ಟ್ರೀಯ ಪಿಂಚಣಿಯಾಗಿ ಈ ಯೋಜನೆಯು ಪರಿವರ್ತನೆಯಾಗಲಿದೆ.

ಎನ್‌ಪಿಎಸ್‌ನಡಿ ತೆರಿಗೆ ವಿನಾಯಿತಿ ಹೆಚ್ಚಳ: ಖಾಸಗಿ  ವಲಯದಲ್ಲಿ ಉದ್ಯೋಗದಾತರು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೀಡುವ ಮೂಲ ವೇತನದ ಶೇ 10ರಷ್ಟು ಮೊತ್ತಕ್ಕೆ ಈ ಮೊದಲು ತೆರಿಗೆ ವಿನಾಯಿತಿ ಲಭಿಸುತ್ತಿತ್ತು. ಸದ್ಯ ಇದನ್ನು ಶೇ 14ರಷ್ಟಕ್ಕೆ ಹೆಚ್ಚಿಸಲಾಗಿದೆ. ಸದ್ಯ ಸರ್ಕಾರಿ ನೌಕರರಿಗೆ ಶೇ 14ರಷ್ಟಕ್ಕೆ ತೆರಿಗೆ ವಿನಾಯಿತಿ ಲಭಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.