ADVERTISEMENT

‘ಟಾಟಾ ಟ್ರಸ್ಟ್‌ಗಳಿಗೆ ತೆರಿಗೆ ವಿನಾಯಿತಿ ಸ್ಥಾನ ಮುಂದುವರಿಕೆ’

ಪಿಟಿಐ
Published 29 ಡಿಸೆಂಬರ್ 2020, 19:09 IST
Last Updated 29 ಡಿಸೆಂಬರ್ 2020, 19:09 IST
ರತನ್‌ ಟಾಟಾ
ರತನ್‌ ಟಾಟಾ   

ನವದೆಹಲಿ: ಟಾಟಾ ಸಮೂಹಕ್ಕೆ ಸೇರಿರುವ ಮೂರು ಟ್ರಸ್ಟ್‌ಗಳ ತೆರಿಗೆ ವಿನಾಯಿತಿ ಸ್ಥಾನಮಾನ ರದ್ದುಪಡಿಸುವ ಆದಾಯ ತೆರಿಗೆ ಇಲಾಖೆಯ ಪರಿಷ್ಕೃತ ಆದೇಶವನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ರದ್ದುಮಾಡಿದೆ.

ರತನ್‌ ಟಾಟಾ ಟ್ರಸ್ಟ್‌, ಜೆಆರ್‌ಡಿ ಟಾಟಾ ಟ್ರಸ್ಟ್‌ ಮತ್ತು ದರೋಬ್ಜಿ ಟಾಟಾ ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ ಷೇರುಪಾಲು ಹೊಂದಿವೆ ಎನ್ನುವ ಆಧಾರದ ಮೇಲೆ ಈ ಟ್ರಸ್ಟ್‌ಗಳಿಗೆ ನೀಡಿರುವ ತೆರಿಗೆ ವಿನಾಯಿತಿಯನ್ನು ರದ್ದುಪಡಿಸುವ ಸಂಬಂಧ 2019ರ ಮಾರ್ಚ್‌ನಲ್ಲಿ ಇಲಾಖೆಯು ಪರಿಷ್ಕೃತ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಟಾಟಾ ಸಮೂಹದ ಟ್ರಸ್ಟ್‌ಗಳು ನ್ಯಾಯಮಂಡಳಿಗೆ ಮನವಿ ಸಲ್ಲಿಸಿದ್ದವು.

ತೆರಿಗೆ ವಿನಾಯಿತಿ ಸ್ಥಾನಮಾನವನ್ನು ಮುಂದುವರಿಸುವ ಕುರಿತಾಗಿ ಐಟಿಎಟಿಯ ಮುಂಬೈ ಪೀಠವು ಡಿಸೆಂಬರ್‌ 28ರಂದು ಮೂರು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.

ADVERTISEMENT

ಈ ಮೂರು ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ ಒಟ್ಟಾರೆ ಶೇ 66ರಷ್ಟು ಷೇರುಪಾಲು ಹೊಂದಿವೆ.

ಷೇರುಗಳಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ ಹಣ ತೊಡಗಿಸಿಲ್ಲ. ಟಾಟಾ ಸಮೂಹದ ಯಶಸ್ಸಿನ ಫಲವನ್ನು ಹಂಚುವ ಉದ್ದೇಶದಿಂದ ಸಾರ್ವಜನಿಕ ಪ್ರಯೋಜನಕ್ಕಾಗಿ ಹೂಡಿಕೆ ಮಾಡಿವೆ ಎಂದು ಐಟಿಎಟಿ ತಿಳಿಸಿದೆ.

ಮಿಸ್ತ್ರಿ ನಡೆಗೆ ಟೀಕೆ: ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೆಲವೇ ವಾರದೊಳಗೆ ತೆರಿಗೆ ಇಲಾಖೆಗೆ ದಾಖಲೆಪತ್ರಗಳನ್ನು ನೀಡಿರುವ ಸೈರಸ್‌ ಮಿಸ್ತ್ರಿ ನಡೆಯನ್ನು ನ್ಯಾಯಮಂಡಳಿಯು ಕಟುವಾಗಿ ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.