ನವದೆಹಲಿ: ‘ಬಾಕಿ ಉಳಿದಿರುವ ನೇರ ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳ ಮೇಲ್ಮನವಿಯ ಇತ್ಯರ್ಥಕ್ಕೆ ‘ವಿವಾದ್ ಸೆ ವಿಶ್ವಾಸ್’ ಎಂಬ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕುರಿತು ತೆರಿಗೆದಾರರಲ್ಲಿ ಇರಬಹುದಾದ ಸಂದೇಹಗಳ ನಿವಾರಣೆಗೆ ಶೀಘ್ರದಲ್ಲಿ ಸಮಗ್ರ ಮಾಹಿತಿಯನ್ನು ಬಿಡುಗಡೆಗೊಳಿಸಲಾಗುವುದು’ ಎಂದು ನೇರ ತೆರಿಗೆ ಆಡಳಿತ ವಿಭಾಗದ ಅಧ್ಯಕ್ಷ ರವಿ ಅಗರವಾಲ್ ಬುಧವಾರ ಹೇಳಿದ್ದಾರೆ.
ಬಜೆಟ್ ನಂತರ ಪಿಟಿಐಗೆ ಮಾಹಿತಿ ನೀಡಿರುವ ಅವರು, ‘ದೇಶದ ವಿವಿಧ ನ್ಯಾಯಾಲಯಗಳಲ್ಲಿ ನೇರ ತೆರಿಗೆ ಸಂಬಂಧಿತ ವ್ಯಾಜ್ಯಗಳ ಸಾಕಷ್ಟು ಮೇಲ್ಮನವಿಗಳು ದಾಖಲಾಗಿವೆ. ಈ ಹೊಸ ಯೋಜನೆಯನ್ನು ಆಯ್ದುಕೊಂಡರೆ, ಹೀಗೆ ಬಾಕಿ ಉಳಿದ ಹಲವು ಮೇಲ್ಮನವಿಗಳು ಇತ್ಯರ್ಥವಾಗಲಿವೆ’ ಎಂದಿದ್ದಾರೆ.
'ವಿವಾದ್ ಸೆ ವಿಶ್ವಾಸ್ ಯೋಜನೆಯನ್ನು ನೇರ ತೆರಿಗೆ ಅಥವಾ ಆದಾಯ ತೆರಿಗೆ ವಿಭಾಗದಲ್ಲಿ 2020ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಇದು ತುಸುಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ. ಹಲವು ಲಕ್ಷ ತೆರಿಗೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರ ಪರಿಣಾಮ ಬೊಕ್ಕಸಕ್ಕೆ ₹75 ಸಾವಿರ ಕೋಟಿ ಹರಿದುಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ.
'ಈ ಯೋಜನೆಯನ್ನು ಆಯ್ದುಕೊಳ್ಳುವವರಿಗೆ ಇದರ ಆರಂಭಿಕ ದಿನಾಂಕ ಡಿ. 31 ಆಗಿದೆ. ಹೀಗಾಗಿ ಶೀಘ್ರದಲ್ಲಿ ಈ ಕುರಿತು ಅಧಿಸೂಚನೆ ಬಿಡುಗಡೆ ಮಾಡಲಾಗುವುದು. ಅದರೊಂದಿಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುವುದು’ ಎಂದು ಅಗರವಾಲ್ ಹೇಳಿದ್ದಾರೆ.
‘ಹೀಗಾಗಿ ಬಾಕಿ ಉಳಿದ ವ್ಯಾಜ್ಯಗಳ ಮೇಲ್ಮನವಿಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದಾರೆ. ಹೀಗಾಗಿ ಯೋಜನೆಯ ಆರಂಭದ ಜತೆಗೆ ಕೊನೆಯ ದಿನಾಂಕವನ್ನೂ ಅಧಿಸೂಚನೆಯಲ್ಲಿ ನಮೂದಿಸಲಾಗುವುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.