ADVERTISEMENT

ಟಿಸಿಎಸ್‌ ಜಗತ್ತಿನ ಎರಡನೇ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌: ವರದಿ

ಪಿಟಿಐ
Published 26 ಜನವರಿ 2022, 11:58 IST
Last Updated 26 ಜನವರಿ 2022, 11:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಾಗತಿಕ ಮಟ್ಟದಲ್ಲಿ ಐ.ಟಿ. ಸೇವಾ ವಲಯದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಬ್ರ್ಯಾಂಡ್‌ ಮೌಲ್ಯಮಾಪನ ಸಲಹಾ ಸಂಸ್ಥೆ ಬ್ರ್ಯಾಂಡ್‌ ಫೈನಾನ್ಸ್‌ ಹೇಳಿದೆ. ಆ್ಯಕ್ಸೆಂಚರ್‌ ಕಂಪನಿಯು ಜಗತ್ತಿನ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.

ಸಂಸ್ಥೆಯು ಬಿಡುಗಡೆ ಮಾಡಿರುವ ‘ಬ್ರ್ಯಾಂಡ್‌ ಫೈನಾನ್ಸ್‌ ಐ.ಟಿ. ಸರ್ವಿಸ್‌ 25’ ವರದಿಯ ಪ್ರಕಾರ, ಪ್ರಮುಖ 25 ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಭಾರತದ ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌, ಟೆಕ್‌ ಮಹೀಂದ್ರ ಮತ್ತು ಎಲ್‌ಟಿಐ ಬ್ರ್ಯಾಂಡ್‌ಗಳು ಸಹ ಸ್ಥಾನ ಪಡೆದಿವೆ.

2020–2022ರ ಅವಧಿಯಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮುಂಚೂಣಿ 10 ಐ.ಟಿ. ಸೇವಾ ಕಂಪನಿಗಳ ಪೈಕಿ ಭಾರತದ ಒಟ್ಟು ಆರು ಕಂಪನಿಗಳು ಇವೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

2020–2022ರ ಅವಧಿಯಲ್ಲಿ ಭಾರತದ ಐ.ಟಿ. ಬ್ರ್ಯಾಂಡ್‌ಗಳ ಸರಾಸರಿ ಬೆಳವಣಿಗೆಯು ಶೇಕಡ 51ರಷ್ಟಾಗಿದೆ. ಇದೇ ವೇಳೆ, ಅಮೆರಿಕದ ಬ್ರ್ಯಾಂಡ್‌ಗಳ ಬೆಳವಣಿಗೆಯು ಶೇ 7ರಷ್ಟು ಇಳಿಕೆ ಕಂಡಿದೆ.

ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಮತ್ತು ಡಿಜಿಟಲೀಕರಣವು ವೇಗ ಪಡೆದುಕೊಂಡಿದ್ದು ಭಾರತದಲ್ಲಿ ಐ.ಟಿ. ಸೇವಾ ಕೇಂದ್ರಗಳ ವಿಸ್ತರಣೆಯನ್ನು ಸುಗಮಗೊಳಿಸಿದೆ. ಐ.ಟಿ. ಸೇವೆಗಳ ಬ್ರ್ಯಾಂಡ್‌ಗಳ ಉತ್ತಮ ಬೆಳವಣಿಗೆ ಮತ್ತು ಹೆಚ್ಚಿನ ಜನರು ಡಿಜಿಟಲ್‌ ಕೌಶಲ ಪಡೆದುಕೊಂಡಿರುವುದರಿಂದಾಗಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ಇಂಟರ್‌ನೆಟ್‌ ಆಫ್ ಥಿಂಗ್ಸ್‌ (ಐಒಟಿ) ವ್ಯವಸ್ಥೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿ ತಿಳಿಸಿದೆ.

ರ್‍ಯಾಂಕಿಂಗ್‌ನಲ್ಲಿ ಐಬಿಎಂ ನಾಲ್ಕನೇ ಸ್ಥಾನಕ್ಕೆ ಇಳಿಕೆ ಕಂಡಿದ್ದು, ಟಿಸಿಎಸ್‌ ಎರಡನೇ ಸ್ಥಾನಕ್ಕೇರಿದೆ ಎಂದು ಹೇಳಿದೆ. ಈ ಶ್ರೇಯಾಂಕವು ಕಂಪನಿಗೆ ಒಂದು ಪ್ರಮುಖ ಮೈಲಿಗಲ್ಲು ಆಗಿದ್ದು, ಮಾರುಕಟ್ಟೆ ಪ್ರಸ್ತುತತೆಯಲ್ಲಿ ಆಗಿರುವ ಹೆಚ್ಚಳದ ಸಂಕೇತವಾಗಿದೆ ಎಂದು ಟಿಸಿಎಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ರಾಜಶ್ರೀ ಅರ್‌. ಅಭಿಪ್ರಾಯಪಟ್ಟಿದ್ದಾರೆ.

ಕಂಪನಿ; ಬ್ರ್ಯಾಂಡ್‌ ಮೌಲ್ಯ

ಆ್ಯಕ್ಸೆಂಚರ್‌;₹ 2.71 ಲಕ್ಷ ಕೋಟಿ

ಟಿಸಿಎಸ್‌;₹ 1.26 ಲಕ್ಷ ಕೋಟಿ

ಇನ್ಫೊಸಿಸ್‌;₹ 96,000 ಕೋಟಿ

ವಿಪ್ರೊ;₹ 47,250 ಕೋಟಿ

ಎಚ್‌ಸಿಎಲ್‌;₹ 45,750 ಕೋಟಿ

ಟೆಕ್‌ ಮಹೀಂದ್ರ;₹ 22,500 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.