ADVERTISEMENT

ಟಿಸಿಎಸ್‌ಗೆ ₹12 ಸಾವಿರ ಕೋಟಿ ಲಾಭ

ಪಿಟಿಐ
Published 11 ಜುಲೈ 2024, 16:02 IST
Last Updated 11 ಜುಲೈ 2024, 16:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), 2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹12,040 ಕೋಟಿ ನಿವ್ವಳ ಲಾಭ ಗಳಿಸಿದೆ.  

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹11,074 ಕೋಟಿ ಲಾಭ ಗಳಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 8.7ರಷ್ಟು ಏರಿಕೆಯಾಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ. 

ಐ.ಟಿ ವಲಯದ ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್‌ ಕಂಪನಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಟಿಸಿಎಸ್‌ನ ತ್ರೈಮಾಸಿಕ ಕಾರ್ಯಾಚರಣೆ ವರಮಾನದಲ್ಲೂ ಶೇ 5.4ರಷ್ಟು ಹೆಚ್ಚಳವಾಗಿದೆ. ಒಟ್ಟು ₹62,613 ಕೋಟಿ ವರಮಾನ ಗಳಿಸಿದೆ.   

ADVERTISEMENT

ಆದರೆ, ಮಾರ್ಚ್‌ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ 3.1ರಷ್ಟು ಇಳಿಕೆಯಾಗಿದೆ. 

‘ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲಿಯೇ ಕೈಗಾರಿಕೆ ಮತ್ತು ಮಾರುಕಟ್ಟೆ ವಲಯದಲ್ಲಿ ಉತ್ತಮ ಬೆಳವಣಿಗೆ ದಾಖಲಿಸಲಾಗಿದೆ’ ಎಂದು ಟಿಸಿಎಸ್‌ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ಕೃತಿವಾಸನ್ ತಿಳಿಸಿದ್ದಾರೆ.

‘ಕಂಪನಿಯು ವಿಶ್ವದಾದ್ಯಂತ ತನ್ನ ಪಾಲುದಾರರ ಜೊತೆಗೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ. ಹೊಸ ತಂತ್ರಜ್ಞಾನದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಒತ್ತು ನೀಡಲಿದೆ. ಜೊತೆಗೆ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಅನ್ವೇಷಣೆಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಹೇಳಿದ್ದಾರೆ.

‘ಫ್ರಾನ್ಸ್‌ನಲ್ಲಿ ಎ.ಐ ಆಧಾರಿತ ಟಿಸಿಎಸ್‌ ಪೇಸ್‌ಪೋರ್ಟ್‌ ಮತ್ತು ಅಮೆರಿಕದಲ್ಲಿ ಇಂಟರ್‌ನೆಟ್‌ ಆಫ್‌ ಥಿಂಗ್ಸ್ ಲ್ಯಾಬ್‌ ತೆರೆಯಲಿದೆ. ಲ್ಯಾಟಿನ್‌ ಅಮೆರಿಕ, ಕೆನಡಾ ಮತ್ತು ಯುರೋಪ್‌ನಲ್ಲಿ ಕಂಪನಿಯ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದ್ದಾರೆ.

‘ಜೂನ್‌ ತ್ರೈಮಾಸಿಕದಲ್ಲಿ ವಾರ್ಷಿಕ ವೇತನ ಏರಿಕೆಯ ನಡುವೆಯೂ ಕಂಪನಿಯ ಕಾರ್ಯಾಚರಣೆಯು ಸದೃಢವಾಗಿದೆ’ ಎಂದು ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಸೆಕ್ಸಾರಿಯಾ ತಿಳಿಸಿದ್ದಾರೆ.

ಪ್ರತಿ ಷೇರಿಗೆ ₹10 ಮಧ್ಯಂತರ ಲಾಭಾಂಶ ನೀಡುವುದಾಗಿ ಕಂಪನಿಯು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.