ಮುಂಬೈ: ಐ.ಟಿ. ಸೇವೆಗಳನ್ನು ನೀಡುವ ದೇಶದ ಅತಿದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ₹ 9,478 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಗಳಿಸಿದ್ದ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇಕಡ 5.2ರಷ್ಟು ಹೆಚ್ಚಾಗಿದೆ.
ವಾರ್ಷಿಕ ವೇತನ ಹೆಚ್ಚಳ ಮತ್ತು ಬಡ್ತಿಯಿಂದಾಗಿ ಕಾರ್ಯಾಚರಣೆ ಲಾಭದಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ.
ಜೂನ್ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ವರಮಾನ ₹ 52,758 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 16.2ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ಕಂಪನಿಯು ತಿಳಿಸಿದೆ.
‘ಉತ್ತಮ ಬೆಳವಣಿಗೆಯೊಂದಿಗೆ ಹೊಸ ಹಣಕಾಸು ವರ್ಷವನ್ನು ಆರಂಭಿಸುತ್ತಿದ್ದೇವೆ. ಎಲ್ಲ ವಿಭಾಗಗಳಲ್ಲಿಯೂ ಬೆಳವಣಿಗೆ ಕಂಡುಬಂದಿದೆ’ ಎಂದು ಕಂಪನಿಯ ಸಿಇಒ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ. ‘ವೆಚ್ಚ ನಿರ್ವಹಣೆಯ ದೃಷ್ಟಿಯಿಂದ ಈ ತ್ರೈಮಾಸಿಕವು ಸವಾಲಿನಿಂದ ಕೂಡಿತ್ತು’ ಎಂದು ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಸೆಕ್‌ಸಾರಿಯಾ ತಿಳಿಸಿದ್ದಾರೆ.
ಕಂಪನಿಯು ₹ 1 ಮುಖಬೆಲೆಯ ಪ್ರತಿ ಷೇರಿಗೆ ₹ 8ರಷ್ಟು ಮಧ್ಯಂತರ ಲಾಭಾಂಶ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.