ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕ: ಟಿಸಿಎಸ್‌ ನಿವ್ವಳ ಲಾಭ ಏರಿಕೆ

ಪಿಟಿಐ
Published 10 ಅಕ್ಟೋಬರ್ 2024, 14:07 IST
Last Updated 10 ಅಕ್ಟೋಬರ್ 2024, 14:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದ ಅತಿದೊಡ್ಡ ಐ.ಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹11,909 ಕೋಟಿ ನಿವ್ವಳ ಲಾಭಗಳಿಸಿದೆ. 

ಕಳೆದ ವರ್ಷದ ಇದೇ ಅವಧಿಯಲ್ಲಿ ₹11,342 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 4.99ರಷ್ಟು ಏರಿಕೆಯಾಗಿದೆ. ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯು ₹12,040 ಕೋಟಿ ಲಾಭ ಗಳಿಸಿತ್ತು. 

‘ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹60,698 ಕೋಟಿ ವರಮಾನಗಳಿಸಲಾಗಿತ್ತು. ಈ ತ್ರೈಮಾಸಿಕದಲ್ಲಿ ₹64,988 ಕೋಟಿ ಗಳಿಸಲಾಗಿದೆ. ಒಟ್ಟಾರೆ ವರಮಾನದಲ್ಲಿ ಶೇ 7.06ರಷ್ಟು ಹೆಚ್ಚಳವಾಗಿದೆ. ಜೂನ್‌ ತ್ರೈಮಾಸಿಕದಲ್ಲಿ ₹63,575 ಕೋಟಿ ಗಳಿಸಲಾಗಿತ್ತು’ ಎಂದು ಕಂಪನಿಯು ಗುರುವಾರ ಷೇರು‍ಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಈ ತ್ರೈಮಾಸಿಕದಲ್ಲಿ ಹೊಸದಾಗಿ ಒಟ್ಟು 5,726 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಒಟ್ಟು ಉದ್ಯೋಗಿಗಳ ಸಂಖ್ಯೆ 6.12 ಲಕ್ಷ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಒಟ್ಟು 11 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

‘ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಏರಿಳಿತ ಕಂಡಿದ್ದೇವೆ. ಈ ತ್ರೈಮಾಸಿಕದಲ್ಲಿ ಕಂಪನಿಯು ಉತ್ತಮ ಸಾಧನೆ ಮಾಡಿದೆ’ ಎಂದು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ಕೃತಿವಾಸನ್ ತಿಳಿಸಿದ್ದಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಬ್ಯಾಂಕಿಂಗ್‌, ಹಣಕಾಸು ಮತ್ತು ವಿಮಾ ವಲಯದಲ್ಲಿನ ವಹಿವಾಟಿನ ಬೆಳವಣಿಗೆಯು ಉತ್ತಮವಾಗಿದೆ’ ಎಂದು ಹೇಳಿದ್ದಾರೆ. 

‘2025–26ನೇ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್‌ ಸಂದರ್ಶನದ ಮೂಲಕ ಹೊಸದಾಗಿ ಟ್ರೈನಿಗಳ ನೇಮಕಕ್ಕೆ ಕ್ರಮವಹಿಸಲಾಗುವುದು’ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿ ಮಿಲಿಂದ್ ಲಕ್ಕಡ್‌ ತಿಳಿಸಿದ್ದಾರೆ.

ಪ್ರತಿ ಷೇರಿಗೆ ₹10 ಮಧ್ಯಂತರ ಲಾಭಾಂಶ ನೀಡಲು ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.