ಮುಂಬೈ: ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯು ನಾಲ್ವರು ಉದ್ಯೋಗಿಗಳನ್ನು ಅಮಾನತು ಮಾಡಿದೆ ಎಂದು ಮೂಲಗಳು ಹೇಳಿವೆ. ಈ ತಿಂಗಳ ಆರಂಭದಲ್ಲಿ ಅನಾಮಧೇಯ ದೂರು ಬಂದ ಬಳಿಕ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ
ಟಾಟಾ ಸಮೂಹದ, ಐ.ಟಿ. ಸೇವೆಗಳನ್ನು ರಫ್ತು ಮಾಡುವ ದೇಶದ ಪ್ರಮುಖ ಕಂಪನಿ ಆಗಿರುವ ಟಿಸಿಎಸ್, ಗುತ್ತಿಗೆ ಆಧಾರದ ಮೇಲೆ ನೌಕರರನ್ನು ಪೂರೈಸುವ ಕೆಲವು ಕಂಪನಿಗಳಿಗೂ ನಿಷೇಧ ಹೇರಿದೆ ಎಂದು ಮೂಲಗಳು ತಿಳಿಸಿವೆ.
ದೂರಿನಲ್ಲಿ ಮಾಡಲಾದ ಆರೋಪಗಳ ಕುರಿತು ತನಿಖೆ ನಡೆಸಲಾಗಿದೆ. ಕಂಪನಿಯಿಂದ ವಂಚನೆ ಆಗಿದೆ ಎಂದಾಗಲಿ ಅಥವಾ ಕಂಪನಿಗೆ ವಂಚನೆ ಆಗಿದೆ ಎಂದಾಗಲಿ ಆರೋಪ ಮಾಡಿಲ್ಲ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ವಿವಿಧ ಯೋಜನೆಗಳಿಗೆ ಅಗತ್ಯವಾದ ಸಂಪನ್ಮೂಲ ಒದಗಿಸುವ ಮತ್ತು ಕೊರತೆ ಕಂಡುಬಂದಲ್ಲಿ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ಒದಗಿಸುವ ಜವಾಬ್ದಾರಿಯು ಸಂಪನ್ಮೂಲ ನಿರ್ವಹಣಾ ಸಮೂಹದ (ಆರ್‌ಎಂಜಿ) ಹೊಣೆಯಾಗಿದೆ. ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳ ನೇಮಕ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿದೆ. ಈ ಅಕ್ರಮದಲ್ಲಿ ಕಂಪನಿಯ ಯಾವುದೇ ಪ್ರಮುಖ ನಿರ್ವಾಹಕ ಸಿಬ್ಬಂದಿ ಭಾಗಿಯಾಗಿಲ್ಲ ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ ಎಂದು ಮೂಲಗಳು ಹೇಳಿವೆ.
ಗುತ್ತಿಗೆ ನೌಕರರ ನೇಮಕ್ಕೆ ಸಂಬಂಧಿಸಿದಂತೆ ಕಂಪನಿಯ ಕೆಲವು ಉದ್ಯೋಗಿಗಳು ಮತ್ತು ಗುತ್ತಿಗೆ ಕಂಪನಿಗಳು ನಿಯಮ ಉಲ್ಲಂಘಿಸಿವೆ ಎಂದು ಷೇರುಪೇಟೆಗೆ ಟಿಸಿಎಸ್ ಮಾಹಿತಿ ನೀಡಿದೆ.
undefined undefined
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.