ನವದೆಹಲಿ: ಐ.ಟಿ ವಲಯದ ಟೆಕ್ ಮಹೀಂದ್ರ ಕಂಪನಿಯು 2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹661 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹1,117 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 41ರಷ್ಟು ಇಳಿಕೆಯಾಗಿದೆ. ವರಮಾನದಲ್ಲಿಯೂ ಶೇ 6.2ರಷ್ಟು ಇಳಿಕೆಯಾಗಿದ್ದು, ₹12,871 ಕೋಟಿ ಆಗಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
2023–24ನೇ ಪೂರ್ಣ ಹಣಕಾಸು ವರ್ಷದ ಲಾಭದಲ್ಲಿ ಶೇ 51ರಷ್ಟು ಕುಸಿತವಾಗಿದ್ದು, ₹2,358 ಕೋಟಿ ಆಗಿದೆ. ವರಮಾನವು ₹51,996 ಕೋಟಿಗೆ ಮುಟ್ಟಿದೆ. ಒಟ್ಟಾರೆ ಶೇ 2.4ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.
‘2023–24ನೇ ಹಣಕಾಸು ವರ್ಷವು ಐ.ಟಿ ವಲಯದ ಪಾಲಿಗೆ ಸವಾಲುಗಳಿಂದ ಕೂಡಿತ್ತು. ಆದರೂ, ಜಾಗತಿಕಮಟ್ಟದ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು ನೀಡಿದ್ದೇವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕರ ವೆಚ್ಚದಲ್ಲಿ ಸುಧಾರಣೆ ಕಾಣಲಿದೆ. ಇದು ವರಮಾನ ಏರಿಕೆಯಾಗುವ ಆಶಾಭಾವ ಹೊಂದಿದ್ದೇವೆ’ ಎಂದು ಕಂಪನಿಯ ಸಿಇಒ ಮೋಹಿತ್ ಜೋಶಿ ಹೇಳಿದ್ದಾರೆ.
ಕಂಪನಿಯಲ್ಲಿನ ಒಟ್ಟು 1,45,455 ಸಿಬ್ಬಂದಿ ಪೈಕಿ ಮಾರ್ಚ್ ತ್ರೈಮಾಸಿಕದಲ್ಲಿ 795 ಉದ್ಯೋಗಿಗಳು ಹೊರಹೋಗಿದ್ದಾರೆ. ಪ್ರತಿ ಷೇರಿಗೆ ₹28 ಲಾಭಾಂಶ ನೀಡಲು ಆಡಳಿತ ಮಂಡಳಿಯು ಶಿಫಾರಸು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.