ನವದೆಹಲಿ: ದೇಶದಲ್ಲಿ ಅಕ್ಟೋಬರ್‌ನಿಂದ 5ಜಿ ಸೇವೆ ಆರಂಭವಾಗುವ ನಿರೀಕ್ಷೆ ಇದ್ದು, ಆ ಬಳಿಕವೂ ಟೆಲಿಕಾಂ ಸೇವೆಗಳು ಕೈಗೆಟುಕುವಂತಿರುತ್ತವೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿರುವುದಾಗಿ ‘ಇಂಡಿಯಾ ಟುಡೆ‘ ವರದಿ ಮಾಡಿದೆ.
‘5ಜಿ ತರಂಗಾಂತರ ಹರಾಜು ಪ್ರಕ್ರಿಯೆ ನಿನ್ನೆಯಷ್ಟೇ ಮುಗಿದಿದ್ದು, 5ಜಿ ಸೇವೆಗೆ ಬೇಕಾದ ಉಪಕರಣಗಳನ್ನು ಸ್ಥಾಪಿಸುವಂತೆ ಟೆಲಿಕಾಂ ಉದ್ಯಮಕ್ಕೆ ಮನವಿ ಮಾಡಿದ್ದೇವೆ. ತರಂಗಾಂತರ ಹಂಚಿಕೆಗೆ ಸಭೆ ಸಹ ನಡೆದಿದೆ. ಬಹುಶಃ ಆಗಸ್ಟ್ 10ಕ್ಕೆ ನಾವು ತರಂಗಾಂತರ ಹಂಚಿಕೆ ಮಾಡುತ್ತೇವೆ. ಅಕ್ಟೋಬರ್ ವೇಳೆಗೆ 5ಜಿ ಸೇವೆ ಒದಗಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಭಾರತದ ಟೆಲಿಕಾಂ ಕ್ಷೇತ್ರವು ವಿಶ್ವದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಸೇವೆ ಒದಗಿಸುತ್ತಿದೆ. ಇದೇ ಟ್ರೆಂಡ್ 5ಜಿ ಬಳಿಕವೂ ಮುಂದುವರಿಯಲಿದೆ ಎಂದು ನಾನು ಆಶಿಸುತ್ತೇನೆ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
5ಜಿ ಸೇವೆಯಿಂದ ಆಗುವ ಎಲೆಕ್ಟ್ರೊಮ್ಯಾಗ್ನೆಟಿಕ್ ರೇಡಿಯೇಶನ್ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಚಿವರು, ಅಮೆರಿಕ ಮತ್ತು ಯೂರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ರೇಡಿಯೇಶನ್ ಪ್ರಮಾಣ 10 ಪಟ್ಟು ಕಡಿಮೆ ಇದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.