ADVERTISEMENT

5ಜಿ ತರಂಗಾಂತರ ಹರಾಜು ಶುರು: ₹96,238 ಕೋಟಿ ಸಂಗ್ರಹಿಸಲು ಕೇಂದ್ರ ಸರ್ಕಾರದ ಗುರಿ

ಪಿಟಿಐ
Published 25 ಜೂನ್ 2024, 14:05 IST
Last Updated 25 ಜೂನ್ 2024, 14:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಆರಂಭಿಸಿದ್ದು, ಇದರ ಒಟ್ಟು ಮೌಲ್ಯ ₹96,238 ಕೋಟಿ ಆಗಿದೆ.

ಕೇಂದ್ರವು 2010ರಿಂದ ಆನ್‌ಲೈನ್‌ ಮೂಲಕ ಬಿಡ್‌ ಸಲ್ಲಿಕೆ ಆರಂಭಿಸಿದೆ. 2022ರ ಅಕ್ಟೋಬರ್‌ನಲ್ಲಿ ಕೊನೆಯದಾಗಿ ಹರಾಜು ಪ್ರಕ್ರಿಯೆ ನಡೆದಿತ್ತು. ಪ್ರಸ್ತುತ 10ನೇ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ADVERTISEMENT

‘ಪ್ರಸ್ತುತ ದೇಶದಲ್ಲಿ ಇರುವ ದೂರಸಂಪರ್ಕ ಸೇವೆಯ ಅಭಿವೃದ್ಧಿ ಮತ್ತು ಮತ್ತಷ್ಟು ವಿಸ್ತರಣೆಗೆ ಈ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಸೇವೆ ನೀಡುವುದೇ ಇದರ ಹಿಂದಿರುವ ಉದ್ದೇಶವಾಗಿದೆ’ ಎಂದು ಸರ್ಕಾರ ತಿಳಿಸಿದೆ. 

ಮಾರ್ಚ್‌ 8ರಂದು ಕೇಂದ್ರ ದೂರಸಂಪರ್ಕ ಇಲಾಖೆಯು ತರಂಗಾಂತರ ಹರಾಜು ಮತ್ತು ಹಂಚಿಕೆ ಕುರಿತ ಷರತ್ತುಗಳ ಬಗ್ಗೆ ಪ್ರಕಟಣೆ ಹೊರಡಿಸಿತ್ತು.

‘800 ಮೆಗಾ ಹರ್ಟ್ಜ್, 900 ಮೆಗಾ ಹರ್ಟ್ಜ್, 1,800 ಮೆಗಾ ಹರ್ಟ್ಜ್, 2,100 ಮೆಗಾ ಹರ್ಟ್ಜ್, 2,500 ಮೆಗಾ ಹರ್ಟ್ಜ್, 3,300 ಮೆಗಾ ಹರ್ಟ್ಜ್ ಹಾಗೂ 26 ಗೀಗಾ ಹರ್ಟ್ಜ್ ತರಂಗಾಂತರ ಬ್ಯಾಂಡ್‌ಗಳ ಹರಾಜು ನಡೆಯಲಿದೆ’ ಎಂದು ತಿಳಿಸಿದೆ.

3,300 ಮೆಗಾ ಹರ್ಟ್ಜ್ ಹಾಗೂ 26 ಗೀಗಾ ಹರ್ಟ್ಜ್ ತರಂಗಾಂತರವು 5ಜಿ ಸೇವೆ ಒದಗಿಸಲು ಸೂಕ್ತ ಬ್ಯಾಂಡ್‌ ಆಗಿವೆ.

ತರಂಗಾಂತರ ಖರೀದಿಗಾಗಿ ರಿಲಯನ್ಸ್ ಜಿಯೊ ಕಂಪನಿಯು ₹3 ಸಾವಿರ ಕೋಟಿ ಮೊತ್ತವನ್ನು ಠೇವಣಿ ಇಟ್ಟಿದೆ. ಹಾಗಾಗಿ, ಹೆಚ್ಚಿನ ಮೊತ್ತದ ಬಿಡ್‌ ಸಲ್ಲಿಕೆ ಮಾಡುವ ನಿರೀಕ್ಷೆಯಿದೆ. ಭಾರ್ತಿ ಏರ್‌ಟೆಲ್‌ ₹1,050 ಕೋಟಿ ಹಾಗೂ ವೊಡಾಫೋನ್ ಐಡಿಯಾ ₹300 ಕೋಟಿ ಠೇವಣಿ ಇಟ್ಟಿದೆ.

‘ಈ ಹರಾಜು ಪ್ರಕ್ರಿಯೆಯು ದೇಶದಲ್ಲಿ 5ಜಿ ಸೇವೆಯ ವೇಗವರ್ಧನೆ ಹಾಗೂ ಕ್ಷಿಪ್ರಗತಿಯಲ್ಲಿ ಸೇವೆ ಒದಗಿಸಲು ಸಹಕಾರಿಯಾಗಿದೆ. ಈಗಿರುವ ಸಂವಹನ ವ್ಯವಸ್ಥೆಯು ಮತ್ತಷ್ಟು ಸದೃಢಗೊಳ್ಳಲಿದೆ’ ಎಂದು ಭಾರತದ ದೂರಸಂಪರ್ಕ ಸೇವಾದಾತರ ಸಂಘಟನೆಯ ಮಹಾನಿರ್ದೇಶಕ ಎಸ್‌.ಪಿ. ಕೊಚ್ಚರ್ ತಿಳಿಸಿದ್ದಾರೆ.

ಯಾವ ಬ್ಯಾಂಡ್‌ಗೆ ಬೇಡಿಕೆ?
ಮೊದಲ ದಿನವೇ ಭಾರ್ತಿ ಏರ್‌ಟೆಲ್‌ ರಿಲಯನ್ಸ್‌ ಜಿಯೊ ಹಾಗೂ ವೊಡಾಫೋನ್ ಐಡಿಯಾ ಕಂಪನಿಯು ಬಿಡ್‌ ಸಲ್ಲಿಕೆ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಈ ಕಂಪನಿಗಳು ಹರಾಜು ಪ್ರಕ್ರಿಯೆಯ ನಾಲ್ಕನೇ ಸುತ್ತಿನಲ್ಲಿ 900 ಮೆಗಾ ಹರ್ಟ್ಜ್ 1800 ಮೆಗಾ ಹರ್ಟ್ಜ್ 2100 ಮೆಗಾ ಹರ್ಟ್ಜ್ ಹಾಗೂ 2500 ಮೆಗಾ ಹರ್ಟ್ಜ್ ಬ್ಯಾಂಡ್‌ಗಳಲ್ಲಿನ ತರಂಗಾಂತರ ಖರೀದಿಗೆ  ಹೆಚ್ಚು ಆಸಕ್ತಿ ತೋರಿವೆ ಎಂದು ಆ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.