ನವದೆಹಲಿ: ಭಾರತದಲ್ಲಿ ಆಮದು ಮಾಡಿಕೊಳ್ಳುವ ವಾಹನ ಮಾರಾಟದಲ್ಲಿ ಕಂಪನಿಯು ಯಶಸ್ವಿಯಾದಲ್ಲಿ ತಯಾರಿಕಾ ಘಟಕ ಸ್ಥಾಪಿಸಬಹುದು ಎಂದು ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲಾನ್ ಮಸ್ಕ್ ಹೇಳಿದ್ದಾರೆ.
ಸದ್ಯ ಭಾರತದಲ್ಲಿ ಇರುವ ಆಮದು ಸುಂಕವು ವಿಶ್ವದಲ್ಲಿಯೇ ಅತಿ ಹೆಚ್ಚಿನದ್ದಾಗಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳಿಗೆ ತಾತ್ಕಾಲಿಕ ಸುಂಕ ಪರಿಹಾರವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಬಿಡುಗಡೆ ಮಾಡಲು ಕೇಳಿದ ಅನುಯಾಯಿಗಳೊಂದಿಗೆ ಟ್ವಿಟರ್‌ನಲ್ಲಿ ಸಂವಹನ ನಡೆಸುವ ವೇಳೆ ಅವರು ರೀತಿ ಹೇಳಿದ್ದಾರೆ.
ಪ್ರಸ್ತುತ, ಭಾರತವು ₹ 29.60 ಲಕ್ಷಕ್ಕೂ ಅಧಿಕ ಮೌಲ್ಯ (ಸಿಐಎಫ್-ವೆಚ್ಚ, ವಿಮೆ ಮತ್ತು ಸರಕು) ಹೊಂದಿರುವ ಸಂಪೂರ್ಣ ಆಮದು ಮಾಡಿದ ಕಾರುಗಳ ಮೇಲೆ ಶೇ 100 ರಷ್ಟು ಆಮದು ಸುಂಕವನ್ನು ವಿಧಿಸುತ್ತಿದೆ.
ಶುದ್ಧ ಇಂಧನದ ವಾಹನಗಳನ್ನು ಡೀಸೆಲ್ ಅಥವಾ ಪೆಟ್ರೋಲ್ ವಾಹನಗಳಂತೆಯೇ ಪರಿಗಣಿಸಲಾಗುತ್ತದೆ. ಇದು ಭಾರತದ ಹವಾಮಾನ ಗುರಿಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ ಎಂದು ಮಸ್ಕ್ ಹೇಳಿದ್ದಾರೆ.
ಆಮದು ಸುಂಕ ತಗ್ಗಿಸುವಂತೆ ಟೆಸ್ಲಾ ಕಂಪನಿಯು ಕೇಳಿರುವುದಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದರು.
ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಟೆಸ್ಲಾ ಕಂಪನಿಯು ಸುವರ್ಣಾವಕಾಶ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈಚೆಗಷ್ಟೇ ಹೇಳಿದ್ದರು.
ಕಂಪನಿಯು ಈಗಾಗಲೇ ಭಾರತೀಯ ವಾಹನ ತಯಾರಕರಿಂದ ವಿವಿಧ ಬಿಡಿಭಾಗಗಳನ್ನು ಪಡೆಯುತ್ತಿದೆ. ಇಲ್ಲಿ ನೆಲೆಯನ್ನು ಸ್ಥಾಪಿಸುವುದು ಕಂಪನಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.