ADVERTISEMENT

ಸ್ಟಾರ್ಟ್‌ಅಪ್‌ ಯಶಸ್ಸಿಗೆ ಸಿ.ಎ ಪಾತ್ರ ಹಿರಿದು: ಕೆ. ಖಂಡೇಲ್ವಾಲ್‌

ಸ್ಟಾರ್ಟ್‌ಅಪ್‌ ಸ್ಪೇರ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:15 IST
Last Updated 27 ಜೂನ್ 2024, 16:15 IST
   

ಬೆಂಗಳೂರು: ಯಾವುದೇ ಉದ್ಯಮ, ನವೋದ್ಯಮ (ಸ್ಟಾರ್ಟ್‌ಅಪ್‌), ಯೂನಿಕಾರ್ನ್‌ಗಳ ಯಶಸ್ಸಿನ ಹಿಂದೆ ಚಾರ್ಟಡ್‌ ಅಕೌಟೆಂಟ್‌ಗಳ (ಸಿ.ಎ) ಪಾತ್ರ ಪ್ರಮುಖವಾಗಿದೆ ಎಂದು ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್‌ ಸಮಿತಿ ಅಧ್ಯಕ್ಷ ಧೀರಜ್‌ ಕೆ. ಖಂಡೇಲ್ವಾಲ್‌ ಅಭಿಪ್ರಾಯಪಟ್ಟರು.

ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯು (ಐಸಿಎಐ) ನಗರದ ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆಯ (ಕೆಟಿಪಿಒ) ಆವರಣದಲ್ಲಿ ಗುರುವಾರದಿಂದ ಆಯೋಜಿಸಿರುವ ಮೂರು ದಿನದ ಸ್ಟಾರ್ಟ್‌ಅಪ್‌ ಸ್ಪೇರ್‌–2024ರ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದಾಯ ತೆರಿಗೆ ವಿವರ ಸಲ್ಲಿಸಲು, ರಿಟರ್ನ್ಸ್ ಫೈಲ್ ಮಾಡಲು, ಆಡಿಟ್‌ (ಲೆಕ್ಕ ಪರಿಶೋಧನೆ), ಮೌಲ್ಯಮಾಪನ, ಹಣಕಾಸು ಸಲಹೆಗಳು ಸೇರಿದಂತೆ ಹಲವಾರು ರೀತಿಯಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಸಿ.ಎಗಳ ಅಗತ್ಯವಿದೆ ಎಂದು ಹೇಳಿದರು.

ADVERTISEMENT

ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 1,500 ಪ್ರತಿನಿಧಿಗಳು, 10 ಸಾವಿರಕ್ಕೂ ಹೆಚ್ಚು ಸಂದರ್ಶಕರು, ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, 70 ಏಜೆಂಲ್‌ ಹೂಡಿಕೆದಾರರು, 70ಕ್ಕೂ ಅಧಿಕ ಯೂನಿಕಾರ್ನ್‌ಗಳು ಭಾಗವಹಿಸುವ ನಿರೀಕ್ಷೆ ಇದೆ. ಮೊದಲ ದಿನವೇ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

‘ಇಂದು ಚಾರ್ಟಡ್‌ ಅಕೌಟೆಂಟ್‌ಗಳೇ ಉದ್ಯಮಿಗಳು, ಸ್ಥಾಪಕರು, ಸಂಸ್ಥಾಪಕರಾಗುತ್ತಿದ್ದಾರೆ. ಜೊತೆಗೆ ಸ್ಟಾರ್ಟ್‌ಅಪ್‌ಗಳ ಯಶಸ್ಸಿಗೆ ಮಾರ್ಗದರ್ಶನ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ’ ಎಂದು ಐಸಿಎಐ  ಮಾಜಿ ಅಧ್ಯಕ್ಷ ಅನಿಕೇತ್‌ ಎಸ್‌. ತಲಾಟಿ ಹೇಳಿದರು.

‘ತಂತ್ರಜ್ಞಾನ ಇಂದು ಎಲ್ಲ ಕ್ಷೇತ್ರದಲ್ಲೂ ವ್ಯಾಪಿಸಿದೆ. ಚಾರ್ಟಡ್‌ ಅಕೌಟೆಂಟ್‌ಗಳು ತಂತ್ರಜ್ಞಾನವನ್ನು ತಮ್ಮ ವೃತ್ತಿ ಜೀವನದಲ್ಲಿ ಬಳಸಿಕೊಳ್ಳಬೇಕು. ದೇಶದ ಆರ್ಥಿಕ ಸ್ಥಿತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು’ ಎಂದು ಐಸಿಎಐ ಉಪಾಧ್ಯಕ್ಷ  ಚರಂಜೋತ್ ಸಿಂಗ್ ನಂದಾ ಹೇಳಿದರು.

ಕಾರ್ಯಕ್ರಮದಲ್ಲಿ ಐಸಿಎಐ ಪದಾಧಿಕಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಸಂದರ್ಶಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.