ADVERTISEMENT

ಚಳಿಗಾಲದಿಂದಾಗಿ ಕಡಿಮೆ ಆಗಿರುವ ಬಳಕೆ: ಕುಸಿಯುತ್ತಲೇ ಇದೆ ಕೊಬ್ಬರಿ ಬೆಲೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:32 IST
Last Updated 7 ನವೆಂಬರ್ 2022, 19:32 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ಬಯಲು ಸೀಮೆಯ ರೈತರ ವಾಣಿಜ್ಯ ಬೆಳೆ ತೆಂಗಿನ ಕಾಯಿ ಹಾಗೂ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಏಳೆಂಟು ತಿಂಗಳ ಹಿಂದೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ಗರಿಷ್ಠ ₹18 ಸಾವಿರ ತಲುಪಿತ್ತು. ಆಗರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ, ಈ ನಗು ಹೆಚ್ಚು ಕಾಲ ಉಳಿಯಲಿಲ್ಲ. ತಿಂಗಳು ಕಳೆದಂತೆ ದರ ಕುಸಿಯತೊಡಗಿತು. ಪ್ರತಿ ತಿಂಗಳೂ ಇಳಿಕೆಯಾಗುತ್ತ ಸಾಗಿದ ಕೊಬ್ಬರಿ ಜೂನ್ ವೇಳೆಗೆ ₹13 ಸಾವಿರಕ್ಕೆ ಬಂದು ತಲುಪಿತು. ಪ್ರಸ್ತುತ ಕ್ವಿಂಟಲ್ ದರ ₹12,500ಕ್ಕೆ ಕುಸಿದಿದೆ.

‘ನಮ್ಮ ಭಾಗದಿಂದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ರವಾನೆಯಾಗುತ್ತದೆ. ಆಯುಧ ಪೂಜೆ, ದೀಪಾವಳಿ ಸಮಯದಲ್ಲಿ ಸಿಹಿ ತಿಂಡಿಗೆ ಹೆಚ್ಚು ಬಳಕೆಯಾಗುತ್ತದೆ. ಆದರೂ ಈ ಬಾರಿ ಬೆಲೆ ಚೇತರಿಸಿಕೊಂಡಿಲ್ಲ. ಜತೆಗೆ ದೆಹಲಿ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಈಗಾಗಲೇ ಶೀತದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಕೊಬ್ಬರಿ ಬಳಕೆ ಕಡಿಮೆ ಇರುತ್ತದೆ. ಹಾಗಾಗಿ ಬೆಲೆ ಕುಸಿಯುತ್ತದೆ’ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ADVERTISEMENT

‘ಸಾಮಾನ್ಯವಾಗಿ ಚಳಿಗಾಲದಲ್ಲಿ ಕೊಬ್ಬರಿ ಬಳಕೆ ಕಡಿಮೆ ಮಾಡುತ್ತಾರೆ. ಆವಕವೂ ಸಹ ಕಡಿಮೆ ಇರುತ್ತದೆ. ಸಹಜವಾಗಿ ನವೆಂಬರ್‌ನಿಂದ ಫೆಬ್ರುವರಿವರೆಗೂ ಕೊಬ್ಬರಿ ಬೆಲೆ ಕುಸಿತ ಸಾಮಾನ್ಯ. ಇದನ್ನು ಬೆಲೆ ಕುಸಿತ ಎಂದು ಹೇಳಲಾಗದು. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ವರ್ತಕ ನಾಗರಾಜ್ ತಿಳಿಸಿದರು.

ತೆಂಗಿನಕಾಯಿ ಬೆಲೆಯೂ ಕುಸಿತ
ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಆವಕ ಹೆಚ್ಚಾಗಿದ್ದು ಬೆಲೆ ಕುಸಿದಿದೆ. ಒಂದು ತೆಂಗಿನಕಾಯಿ ಸಗಟು ಮಾರುಕಟ್ಟೆಯಲ್ಲಿ ₹7ರಿಂದ 9ಕ್ಕೆ ಮಾರಾಟವಾಗುತ್ತಿದೆ. ಕಳೆದ ಮೇ, ಜೂನ್ ಸಮಯದಲ್ಲಿ ₹15–16ರ ವರೆಗೂ ಏರಿಕೆಯಾಗಿತ್ತು.

ಎರಡು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಇಳುವರಿ ಹೆಚ್ಚಾಗಿದ್ದು ಬೆಲೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.