ಹುಬ್ಬಳ್ಳಿ: ದ್ರಾಕ್ಷಾರಸ ಉತ್ಪಾದನೆಗೆ ಬೇಕಾಗುವ ವೈನ್ ದ್ರಾಕ್ಷಿ ರಾಜ್ಯದ ಬಹುತೇಕ ಕಡೆ ಬೆಳೆಯಲಾಗುತ್ತದೆ. ಆದರೆ, ಕಳೆದ ವರ್ಷ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ.
ಸಾಮಾನ್ಯವಾಗಿ ಜನವರಿಯಿಂದ ಮೇ ಅವಧಿಯಲ್ಲಿ ದ್ರಾಕ್ಷಿ ಬೆಳೆ ಕೈ ಸೇರುತ್ತದೆ. ಈ ವರ್ಷ ಬೆಳೆದ ದ್ರಾಕ್ಷಿ ಮುಂದಿನ ವರ್ಷ ವೈನ್‌ಗೆ ಬಳಕೆ ಆಗುತ್ತದೆ. ಹೀಗಾಗಿ 2022–23ನೇ ಸಾಲಿಗೆ ಹೋಲಿಸಿದರೆ 2023–24ರಲ್ಲಿ ಉತ್ಪಾದನೆ ಕುಸಿದಿದೆ. 2022–23ರಲ್ಲಿ 15 ಸಾವಿರ ಟನ್ ವೈನ್ ದ್ರಾಕ್ಷಿ ಉತ್ಪಾದನೆಯಾಗಿ, 121 ಲಕ್ಷ ಲೀಟರ್ ವೈನ್ ಮಾರಾಟವಾಗಿ ₹401 ಕೋಟಿ ಆದಾಯ ಬಂದಿತ್ತು. ಆದರೆ, 2023–24ರಲ್ಲಿ 14 ಸಾವಿರ ಟನ್ ವೈನ್ ದ್ರಾಕ್ಷಿ ಉತ್ಪಾದನೆಯಾಗಿ, 114 ಲಕ್ಷ ಲೀಟರ್ ವೈನ್ ಮಾರಾಟವಾಗಿ ₹388 ಕೋಟಿ ಮಾತ್ರ ಆದಾಯ ಬಂದಿದೆ.
‘ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಮೈಸೂರು, ಚಾಮರಾಜನಗರ, ಬೆಂಗಳೂರು (ನಗರ/ಗ್ರಾಮಾಂತರ), ಚಿಕ್ಕಬಳ್ಳಾಪುರ, ಬಳ್ಳಾರಿ ಸೇರಿ ಒಟ್ಟು 16 ಜಿಲ್ಲೆಗಳಲ್ಲಿ ಅಂದಾಜು 2,000 ಎಕರೆ ಪ್ರದೇಶದಲ್ಲಿ ವೈನ್ ದ್ರಾಕ್ಷಿ ಬೆಳೆಯಲಾಗುತ್ತದೆ. ಇದರಲ್ಲಿ ಶೇ 70ರಷ್ಟು ದ್ರಾಕ್ಷಿಯನ್ನು ಒಣದ್ರಾಕ್ಷಿಗಾಗಿ ಬಳಸಿದರೆ, ಶೇ10 ರಷ್ಟನ್ನು ವೈನ್ ಮಾಡಲು ಉಪಯೋಗಿಸಲಾಗುತ್ತದೆ. ಶೇ 20ರಷ್ಟು ದ್ರಾಕ್ಷಿಯನ್ನು ಮಾರಲಾಗುತ್ತದೆ’ ಎಂದು ರಾಜ್ಯ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ‘ಪ್ರಜಾವಾಣಿ’ಗೆ ತಿಳಿಸಿದರು.
‘2023–24ರಲ್ಲಿ 1 ಕೆ.ಜಿ ದ್ರಾಕ್ಷಿಗೆ ಹಾಪ್‌ಕಾಮ್ಸ್ ದರ ₹46 ಇತ್ತು (ತಳಿಗಳ ಆಧಾರದ ಮೇಲೆ ದರ ನಿಗದಿ). 1 ಕೆ.ಜಿ ವೈನ್ ದ್ರಾಕ್ಷಿಗೆ ₹55 ರಿಂದ ₹60 ದರ ಇತ್ತು. 2019–20ರಿಂದ ಈವರೆಗೆ ರಾಜ್ಯದಲ್ಲಿ 460 ಲಕ್ಷ ಲೀಟರ್ ವೈನ್ ತಯಾರಿಸಲಾಗಿದೆ. 2019–20ರಿಂದ 2023–24ರವರೆಗೆ ವೈನ್ ಮಾರಾಟದಿಂದ ₹1,602 ಕೋಟಿ ಆದಾಯ ಬಂದಿದೆ’ ಎಂದರು.
‘ಪ್ರತಿ ಲೀಟರ್‌ಗೆ ₹300 ತೆರಿಗೆ’
‘ಕಳೆದ ಬಾರಿ ಮಹಾರಾಷ್ಟ್ರದ ನಾಸಿಕ್‌ದಿಂದಲೂ ವೈನ್ ದ್ರಾಕ್ಷಿ ಆಮದು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಜಿಎಸ್‌ಟಿ ಮಾತ್ರ ತಗಲುತ್ತದೆ. ಆದರೆ, ಇಲ್ಲಿಂದ ಹೊರರಾಜ್ಯಗಳಿಗೆ ವೈನ್ ಮಾರಲು ಹಾಗೂ ಆಮದು ಮಾಡಿಕೊಳ್ಳಲು ಪ್ರತಿ ಲೀಟರ್‌ಗೆ ₹300 ತೆರಿಗೆ ಕಟ್ಟಬೇಕು. ಹೊರ ರಾಜ್ಯದವರು ಇಲ್ಲಿಯೇ ಖಾಸಗಿ ವೈನರಿಗಳನ್ನು ತೆರೆದಿರುವುರಿಂದ ಮಾರಾಟದಲ್ಲಿ ಇಳಿಕೆ ಆಗಿದೆ’ ಎಂದು ಅವರು ತಿಳಿಸಿದರು.
‘ಈ ವರ್ಷದ ರಾಜ್ಯ ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳಿಂದ ವೈನ್ ದರದಲ್ಲಿ ಏರಿಕೆ ಇಲ್ಲ. ಸೇವನೆ ಮಾಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಆದಾಯವೂ ಸ್ವಲ್ಪ ಕಡಿಮೆ ಆಗಿದೆ’ ಎಂದರು.
‘ಶೀತಲ ಘಟಕ ನಿರ್ಮಾಣ ಶೀಘ್ರ ಆರಂಭ’
ರಾಜ್ಯದ 32473 ಹೆಕ್ಟೇರ್ ಪ್ರದೇಶದಲ್ಲಿ ವರ್ಷಕ್ಕೆ 8.21 ಲಕ್ಷ ಮೆಟ್ರಿಕ್ ಟನ್ ದ್ರಾಕ್ಷಿ ಬೆಳೆದರೆ ವಿಜಯಪುರ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 25637 ಹೆಕ್ಟೇರ್ ಪ್ರದೇಶದಲ್ಲಿ 6.64 ಲಕ್ಷ ಮೆಟ್ರಿಕ್ ಟನ್ ದ್ರಾಕ್ಷಿ ಬೆಳೆಯಲಾಗುತ್ತದೆ. ‘ವಿಜಯಪುರದಲ್ಲಿ ವೈನ್ ಪಾರ್ಕ್‌ಗೆಂದೇ ಮೀಸಲಿಟ್ಟಿರುವ 141 ಎಕರೆ ಪ್ರದೇಶದಲ್ಲಿ 10 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಘಟಕ ನಿರ್ಮಿಸಲು ನಬಾರ್ಡ್‌ನಿಂದ ಈಗಾಗಲೇ ₹39.7 ಕೋಟಿ ನೆರವು ಸಿಕ್ಕಿದೆ. ಟೆಂಡರ್ ಸಹ ಕರೆಯಲಾಗಿದ್ದು ಜೂನ್ ಅಂತ್ಯದ ಒಳಗೆ ಪ್ರಕ್ರಿಯೆ ಪೂರ್ಣ ಆಗಲಿದೆ. ಶೀಘ್ರವೇ ಘಟಕ ನಿರ್ಮಾಣ ಆರಂಭವಾಗಲಿದೆ’ ಎಂದು ಟಿ.ಸೋಮು ತಿಳಿಸಿದರು.
ರಾಜ್ಯದಲ್ಲಿ ಸದ್ಯ 19 ಖಾಸಗಿ ವೈನರಿಗಳಿವೆ. 1000ಕ್ಕೂ ಹೆಚ್ಚು ರೈತರು ಅವಲಂಬಿತ ಕಾರ್ಮಿಕರು ವೈನರಿಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅವರು ಮಾತ್ರ ವೈನ್ ದ್ರಾಕ್ಷಿ ಬೆಳೆಯುತ್ತಾರೆ.–ಟಿ.ಸೋಮು ವ್ಯವಸ್ಥಾಪಕ ನಿರ್ದೇಶಕ ರಾಜ್ಯ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.