ADVERTISEMENT

ನಕಲಿ ನೋಟು: ಇಲ್ಲ ಅಂಕುಶ

ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯೂರೊ ವರದಿ

ಪಿಟಿಐ
Published 2 ಜನವರಿ 2023, 22:03 IST
Last Updated 2 ಜನವರಿ 2023, 22:03 IST
ನಕಲಿ ನೋಟುಗಳು (ಸಾಂದರ್ಭಿಕ ಚಿತ್ರ)
ನಕಲಿ ನೋಟುಗಳು (ಸಾಂದರ್ಭಿಕ ಚಿತ್ರ)   

ನವದೆಹಲಿ: ನೋಟು ರದ್ದತಿಯ ತೀರ್ಮಾನ ಜಾರಿಗೆ ಬಂದು ಆರು ವರ್ಷಗಳು ಕಳೆದಿದ್ದರೂ, ನಕಲಿ ನೋಟುಗಳ ಹಾವಳಿ ನಿಂತಿಲ್ಲ. ನಕಲಿ ನೋಟುಗಳ ಚಲಾವಣೆ ನಿಯಂತ್ರಿಸುವುದು ಕೂಡ ನೋಟು ರದ್ದತಿ ತೀರ್ಮಾನ ಒಂದು ಉದ್ದೇಶವಾಗಿತ್ತು.

ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯೂರೊ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, ದೇಶದ ಕಾನೂನು ಜಾರಿ ಸಂಸ್ಥೆಗಳು 2016ರ ನಂತರದಲ್ಲಿ ಒಟ್ಟು ₹ 245.33 ಕೋಟಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿವೆ. ನೋಟು ರದ್ದತಿ ತೀರ್ಮಾನ ಜಾರಿಗೆ ಬಂದಿದ್ದು 2016ರಲ್ಲಿ.

2016ರ ನಂತರದಲ್ಲಿ ಅತಿಹೆಚ್ಚಿನ ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು 2020ರಲ್ಲಿ. ಆ ವರ್ಷ ಒಟ್ಟು ₹ 92.17 ಕೋಟಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. 2016ರಲ್ಲಿ ಅತ್ಯಂತ ಕಡಿಮೆ (₹ 15.92 ಕೋಟಿ ಮುಖಬೆಲೆ) ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

2021ರಲ್ಲಿ ₹ 20.39 ಕೋಟಿ, 2019ರಲ್ಲಿ ₹ 34.79 ಕೋಟಿ, 2018ರಲ್ಲಿ ₹ 26.35 ಕೋಟಿ, 2017ರಲ್ಲಿ ₹ 55.71 ಕೋಟಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಎನ್‌ಸಿಆರ್‌ಬಿ ಬಳಿ ಇದೆ.

2022ರ ಮೇ ತಿಂಗಳಲ್ಲಿ ಪ್ರಕಟವಾದ ಆರ್‌ಬಿಐ ವಾರ್ಷಿಕ ವರದಿ ಅನ್ವಯ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆ ಮಾಡಲಾದ ₹ 500 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು 2021–22ರಲ್ಲಿ ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಎರಡು ‍ಪಟ್ಟು ಹೆಚ್ಚಾಗಿದೆ. 2021–22ರಲ್ಲಿ 79,669 ನಕಲಿ ನೋಟುಗಳನ್ನು ಪತ್ತೆ ಮಾಡಲಾಯಿತು.

2021–22ರಲ್ಲಿ ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆ ಮಾಡಲಾದ ₹ 2000 ಮುಖಬೆಲೆಯ ನಕಲಿ ನೋಟುಗಳ ಪ್ರಮಾಣವು ಶೇ 54.6ರಷ್ಟು ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.