ಬೆಂಗಳೂರು: ಪುಣೆ ಮೂಲದ ಥರ್ಮ್ಯಾಕ್ಸ್ ಕಂಪನಿಯು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರೀಡಿಸ್ಕವರ್ ರೋಡ್ ಶೋನಲ್ಲಿ ಕರ್ನಾಟಕದ ಕೈಗಾರಿಕಾ ವಲಯಕ್ಕೆ ಅನುಗುಣವಾಗಿ ಹಸಿರು ತಂತ್ರಜ್ಞಾನ ಮತ್ತು ನೀರಿನ ನಿರ್ವಹಣೆಯಲ್ಲಿ ಸಾಧಿಸಿರುವ ಪ್ರಗತಿ ಕುರಿತು ಪ್ರದರ್ಶನ ನೀಡಿತು.
ಪ್ರದರ್ಶನದಲ್ಲಿ ನೀರು ಮತ್ತು ತ್ಯಾಜ್ಯ ನೀರಿನ ಸಂಸ್ಕರಣಾ ತಂತ್ರಜ್ಞಾನಗಳು, ತ್ಯಾಜ್ಯದಿಂದ ಇಂಧನ ಪರಿವರ್ತನೆ (ಉತ್ಪಾದನೆ), ನವೀಕರಿಸಬಹುದಾದ ಇಂಧನ ವ್ಯವಸ್ಥೆ, ಜೈವಿಕ ಅನಿಲ, ವಿದ್ಯುತ್ ಸೇರಿದಂತೆ ಇತರೆ ಅತ್ಯಾಧುನಿಕ ಪರಿಹಾರಗಳ ಶ್ರೇಣಿಯನ್ನು ಪ್ರದರ್ಶಿಸಿತು.
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ತಲೆದೋರಿರುವ ನೀರಿನ ಕೊರತೆ ಪರಿಹರಿಸುವುದು ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಥರ್ಮ್ಯಾಕ್ಸ್ ನೀರು ಮತ್ತು ತ್ಯಾಜ್ಯ ನೀರಿನ ಸಂಸ್ಕರಣಾ ಪರಿಹಾರಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಪ್ರಮುಖವಾಗಿ ನೀರಿನ ಕೊರತೆ ಸರಿದೂಗಿಸುವ ಘಟಕಗಳು, ಶೂನ್ಯ ದ್ರವ ವಿಸರ್ಜನೆ (ಜೆಎಲ್‍ಡಿ) ಸೌಲಭ್ಯ, ಮೆಕಾನಿಕಲ್ ವೇಪರ್ ರೀಕಂಪ್ರೆಶನ್ (ಎಂವಿಆರ್) ತಂತ್ರಜ್ಞಾನ ಸೇರಿವೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು, ಟಿಎಸ್‍ಎ ಪ್ರೊಸೆಸ್ ಇಕ್ವಿಪ್‍ಮೆಂಟ್ಸ್‌ನಲ್ಲಿ ಶೇ 51ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಔಷಧ ತಯಾರಿಕಾ ಘಟಕಗಳು, ಬಯೊಫಾರ್ಮಾಸಿಟಿಕಲ್ಸ್, ಸೆಮಿ ಕಂಡಕ್ಟರ್ ಸೇರಿದಂತೆ ವಿವಿಧ ಉದ್ಯಮದಲ್ಲಿ ನೀರಿನ ತ್ಯಾಜ್ಯವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಶಿಶ್ ಭಂಡಾರಿ, ಇಂಧನ ಪರಿವರ್ತನೆ ಮತ್ತು ನೀರಿನ ನಿರ್ವಹಣೆಯಲ್ಲಿ ಥರ್ಮ್ಯಾಕ್ಸ್ ಅತ್ಯುತ್ತಮ ಪರಿಹಾರಗಳ ಮೂಲಕ ಕರ್ನಾಟಕದ ಕೈಗಾರಿಕೆಗಳ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಲು ಬದ್ಧವಾಗಿದೆ ಎಂದರು.
ಈ ಅತ್ಯಾಧುನಿಕ ಪರಿಹಾರಗಳು ರಾಜ್ಯದಲ್ಲಿನ ಕೈಗಾರಿಕೆಗಳಿಗೆ ವಿದ್ಯುತ್ ಪರಿವರ್ತನೆ ಮತ್ತು ನೀರಿನ ಸಂರಕ್ಷಣೆ ಉದ್ದೇಶಗಳನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಸ್ಥಿರ ತಂತ್ರಜ್ಞಾನ ಅಳವಡಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ದೇಶದಲ್ಲಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಬಾಯ್ಲರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಬೃಹತ್ ಪ್ರಮಾಣದ ಅಲ್ಯೂಮಿನಿಯಂ ಘಟಕ ಸ್ಥಾಪಿಸಲಾಗಿದ್ದು, ಬಾಯ್ಲರ್‌ನಲ್ಲಿ ಶೇ 100ರಷ್ಟು ಬಯೊಮಾಸ್ ಉತ್ಪಾದನೆ ಮಾಡಲಾಗುತ್ತಿದೆ. ಔಷಧೀಯ ಕ್ಷೇತ್ರದಲ್ಲಿನ ಪ್ರಮುಖ ಕಂಪನಿಗಳೊಂದಿಗೆ ಸಹಯೋಗ ಮಾಡಿಕೊಂಡಿದೆ. ಬಸ್, ಟ್ರಕ್ ಕ್ಯಾಬಿನ್‍ಗಳಿಗೆ ಟಿ-ಎಚ್‍ವಿಎಸಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.