ADVERTISEMENT

ಕೆಲಸದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಗಿರೀಶ್‌ ಚಂದ್ರ ಮುರ್ಮು ಸಲಹೆ

ಪಿಟಿಐ
Published 16 ನವೆಂಬರ್ 2024, 14:18 IST
Last Updated 16 ನವೆಂಬರ್ 2024, 14:18 IST
<div class="paragraphs"><p>ನವದೆಹಲಿಯಲ್ಲಿ ಶನಿವಾರ ನಡೆದ 4ನೇ ಆಡಿಟ್ ದಿನದ ಕಾರ್ಯಕ್ರಮದಲ್ಲಿ ಸಿಎಜಿ ಗಿರೀಶ್‌ ಚಂದ್ರ ಮುರ್ಮು ಅವರು, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಅಭಿನಂದಿಸಿದರು </p></div>

ನವದೆಹಲಿಯಲ್ಲಿ ಶನಿವಾರ ನಡೆದ 4ನೇ ಆಡಿಟ್ ದಿನದ ಕಾರ್ಯಕ್ರಮದಲ್ಲಿ ಸಿಎಜಿ ಗಿರೀಶ್‌ ಚಂದ್ರ ಮುರ್ಮು ಅವರು, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಅಭಿನಂದಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ‘ಲೆಕ್ಕ ಪರಿಶೋಧಕ ಅಧಿಕಾರಿಗಳು ಸಾಂಪ್ರದಾಯಿಕ ವಿಧಾನಕ್ಕೆ ಕಟ್ಟುಬೀಳದೆ ಸೃಜನಾತ್ಮಕವಾಗಿ ಚಿಂತಿಸಬೇಕು. ಕೆಲಸದಲ್ಲಿ ಹೊಸ ತಂತ್ರಗಳನ್ನು ಪ್ರಯೋಗಿಸಬೇಕು. ಆ ಮೂಲಕ ಬದಲಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತ ವ್ಯವಸ್ಥೆಗೆ ಹೊಂದಿಕೊಳ್ಳಬೇಕು’ ಎಂದು ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲ (ಸಿಎಜಿ) ಗಿರೀಶ್‌ ಚಂದ್ರ ಮುರ್ಮು ಸಲಹೆ ನೀಡಿದ್ದಾರೆ.

ADVERTISEMENT

ಇಲ್ಲಿ ಶನಿವಾರ ನಡೆದ 4ನೇ ಆಡಿಟ್‌ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತ್ತಷ್ಟು ಪರಿಣಾಮಕಾರಿಯಾಗಿ ಲೆಕ್ಕ ಪರಿಶೋಧನೆಯನ್ನು ನಿರ್ವಹಿಸಬೇಕಿದೆ. ಹಾಗಾಗಿ, ಅಧಿಕಾರಿಗಳು ಹೊಸ ತಂತ್ರಜ್ಞಾನದ ಅಳವಡಿಕೆಗೆ ಮುಂದಾಗಬೇಕು ಎಂದು ಹೇಳಿದರು.

ಸರ್ಕಾರದ ಆದಾಯ ಮತ್ತು ವೆಚ್ಚಗಳ ಲೆಕ್ಕ ಪರಿಶೋಧನೆಯ ಗುಣಮಟ್ಟ ಸುಧಾರಿಸಬೇಕಿದೆ. ಕೆಲವೊಮ್ಮೆ ಗೋಪ್ಯತೆಯ ಉಲ್ಲಂಘನೆ, ಪಕ್ಷಪಾತ ನಡೆಯುತ್ತವೆ. ಈ ಬೆಳವಣಿಗೆ ಬಗ್ಗೆ ಸಂಸ್ಥೆಗೆ ಅರಿವು ಇದೆ. ಲೆಕ್ಕ‍ಪತ್ರ ಮತ್ತು ಲೆಕ್ಕ ಪರಿಶೋಧನೆಯ ಪರಿಣಾಮಕಾರಿ ನಿರ್ವಹಣೆಗಾಗಿ ಹೊಸ ತಂತ್ರಜ್ಞಾನದ ಬಳಕೆಗೆ ಮುಂದಾಗಿದ್ದೇವೆ ಎಂದು ಹೇಳಿದರು.

ಹೊಸ ತಂತ್ರಜ್ಞಾನವು ಕಾರ್ಯ ವಿಧಾನದಲ್ಲಿ ಸೃಜನಶೀಲತೆ ವೃದ್ಧಿಗೆ ನೆರವಾಗುತ್ತದೆ. ಆರ್ಥಿಕತೆ ಹೆಚ್ಚಳ ಹಾಗೂ ಉತ್ತಮ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮಾತನಾಡಿ, ‘ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲ ಸಂಸ್ಥೆಯು ಶ್ರೀಮಂತ ಪರಂಪರೆಯನ್ನು ಹೊಂದಿದೆ. ತನ್ನ ವಿಶ್ವಾಸಾರ್ಹತೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರು ಪಡೆದಿದೆ’ ಎಂದರು.

ಸಂಸ್ಥೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೇರಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಇದರಿಂದ ಲೆಕ್ಕೆ ಪರಿಶೋಧನೆ ಪ್ರಕ್ರಿಯೆಗಳು ಸದೃಢಗೊಳ್ಳಲಿವೆ. ಜೊತೆಗೆ, ಕೆಲಸದಲ್ಲಿ ಪಾರದರ್ಶಕತೆ ಹೆಚ್ಚಿಸಿದೆ ಎಂದು ಶ್ಲಾಘಿಸಿದರು.

ಲೆಕ್ಕ ಪರಿಶೋಧನೆಯು ಆರ್ಥಿಕ ಶಿಸ್ತು, ಪಾರದರ್ಶಕತೆ ಮತ್ತು ಉತ್ತಮ ಆಡಳಿತ ನಿರ್ವಹಣೆಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

ಸಂಸದೀಯ ಸಮಿತಿಗಳ ಅಧ್ಯಕ್ಷರಾಗಿರುವ ವಿಪಕ್ಷಗಳ ಹಿರಿಯ ಸದಸ್ಯರು ಸಿಎಜಿ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಬಳಿಕ ಅಧಿವೇಶನಗಳಲ್ಲಿ ಚರ್ಚಿಸುತ್ತಾರೆ. ಇದು ಆರ್ಥಿಕ ಹೊಣೆಗಾರಿಕೆಯನ್ನು ಹೆಚ್ಚಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.