ADVERTISEMENT

ಟೊಮೆಟೊ ದರ ಇಳಿಕೆ ನಿರೀಕ್ಷೆ

ಪ್ರತಿ ಕೆ.ಜಿಗೆ ದೇಶದ ಸರಾಸರಿ ಧಾರಣೆ ₹ 65.21

ಪಿಟಿಐ
Published 13 ಜುಲೈ 2024, 15:29 IST
Last Updated 13 ಜುಲೈ 2024, 15:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸ್ತುತ ದೆಹಲಿಯಲ್ಲಿ ಟೊಮೆಟೊ ಧಾರಣೆಯು ಏರಿಕೆಯಾಗಿದೆ. ಆದರೆ, ಆಂಧ್ರಪ್ರದೇಶ ಮತ್ತು ಕರ್ನಾಟಕದಿಂದ ಮಾರುಕಟ್ಟೆಗೆ ಪೂರೈಕೆ ಹೆಚ್ಚಿದೆ. ಹಾಗಾಗಿ, ಮುಂಬರುವ ವಾರಗಳಲ್ಲಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪೂರೈಕೆ ಕೊರತೆಯಿಂದಾಗಿ ಆಲೂಗೆಡ್ಡೆ ಮತ್ತು ಈರುಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಶೀಘ್ರವೇ, ಈ ಎರಡರ ಬೆಲೆಯೂ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

‘ಬಿಸಿ ಗಾಳಿ ಹಾಗೂ ಭಾರಿ ಮಳೆ ಸುರಿದಿರುವುದು ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಕಾರಣವಾಗಿದೆ. ಇದರಿಂದ ದೆಹಲಿ ಸೇರಿ ದೇಶದ ಕೆಲವು ನಗರಗಳಲ್ಲಿ ಟೊಮೆಟೊ, ಆಲೂಗೆಡ್ಡೆ ಮತ್ತು ಈರುಳ್ಳಿ ಧಾರಣೆಯು ಏರುಗತಿಯಲ್ಲಿದೆ’ ಎಂದು ವಿವರಿಸಿದ್ದಾರೆ.

ADVERTISEMENT

ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಸದ್ಯ ಕೆ.ಜಿ ಟೊಮೆಟೊ ಚಿಲ್ಲರೆ ಧಾರಣೆಯು ₹75 ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹150 ದರ ಇತ್ತು. ಮುಂಬೈನಲ್ಲಿ ₹83 ಹಾಗೂ ಕೋಲ್ಕತ್ತದಲ್ಲಿ ₹80 ಬೆಲೆ ಇದೆ. 

ದೇಶದ ಸರಾಸರಿ ಟೊಮೆಟೊ ಚಿಲ್ಲರೆ ಧಾರಣೆ ₹65.21 ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹53.36 ಇತ್ತು.

ಪ್ರಸ್ತುತ ದೆಹಲಿಗೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ ಟೊಮೆಟೊ ಪೂರೈಕೆಯಾಗುತ್ತಿದೆ. ಆಂಧ್ರ ಮತ್ತು ಕರ್ನಾಟಕದಿಂದ ಹೈಬ್ರೀಡ್‌ ಟೊಮೆಟೊ ರಾಷ್ಟ್ರದ ರಾಜಧಾನಿಯ ಮಾರುಕಟ್ಟೆಗೆ ಪೂರೈಕೆಯಾದ ತಕ್ಷಣವೇ ಬೆಲೆ ಇಳಿಕೆಯಾಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸದ್ಯ 283 ಲಕ್ಷ ಟನ್‌ನಷ್ಟು ಆಲೂಗೆಡ್ಡೆಯನ್ನು ದಾಸ್ತಾನು ಮಡಲಾಗಿದೆ. ಇದು ದೇಶೀಯ ಬೇಡಿಕೆಯ ಕೊರತೆಯನ್ನು ನೀಗಿಸಲಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಮಹಾರಾಷ್ಟ್ರದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆಯು ಇಳಿಕೆಯಾಗಿದೆ. ಮುಂಗಾರಿನಲ್ಲಿ ಬಿತ್ತನೆಯಾಗಿರುವ ಈರುಳ್ಳಿಯು ಸೆಪ್ಟೆಂಬರ್‌ಗೆ ಮಾರುಕಟ್ಟೆಗೆ ಪೂರೈಕೆಯಾಗಲಿದೆ. ಹಾಗಾಗಿ, ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.