ನವದೆಹಲಿ:ಬೇಡಿಕೆ ಕುಸಿತ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಉತ್ಪಾದನೆ ಕಡಿತಗೊಳಿಸಬೇಕಾಗಿ ಬಂದಿದೆ. ಹೀಗಾಗಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಚಿಂತನೆ ನಡೆಸುತ್ತಿರುವುದಾಗಿಅತಿ ದೊಡ್ಡ ಬಿಸ್ಕತ್ತು ತಯಾರಿಕಾ ಸಂಸ್ಥೆ ‘ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿ’ ಬುಧವಾರ ಹೇಳಿದೆ.
ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತದಲ್ಲಿ ಸದ್ಯ ಆರ್ಥಿಕ ಕುಸಿತದಿಂದಾಗಿ ಕಾರುಗಳಿಂದ ತೊಡಗಿ ಬಟ್ಟೆ ಮಾರಾಟದವರೆಗೆ ಪ್ರತಿಕೂಲ ಪರಿಣಾಮ ಎದುರಾಗಿದೆ. ಪರಿಣಾಮವಾಗಿ ಕಂಪನಿಗಳು ಉತ್ಪಾದನೆ ಕಡಿತಕ್ಕೆ ಮುಂದಾಗುತ್ತಿವೆ. ಇದು ಪಾರ್ಲೆ ಬಿಸ್ಕತ್ತು ವಹಿವಾಟಿನ ಮೇಲೂ ಪರಿಣಾಮ ಬೀರಿದೆ.
ಇದನ್ನೂ ಓದಿ:ಮಂದಗತಿಯ ಆರ್ಥಿಕತೆ ಕಳವಳಕಾರಿ: ರಘುರಾಂ ರಾಜನ್
ಪಾರ್ಲೆ ಬಿಸ್ಕತ್ತು ಮಾರಾಟದಲ್ಲೂ ಗಣನೀಯ ಕುಸಿತವಾಗಿದ್ದು, ಉತ್ಪಾದನೆ ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ. ಪರಿಣಾಮವಾಗಿ 8 ಸಾವಿರದಿಂದ 10 ಸಾವಿರ ಉದ್ಯೋಗಿಗಳನ್ನು ಕೈಬಿಡಬೇಕಾಗಬಹುದು ಎಂದು ಕಂಪನಿಯ ಉತ್ಪಾದನೆ ಮತ್ತು ಮಾರಾಟ ವಿಭಾಗದ ಮುಖ್ಯಸ್ಥ ಮಯಂಕ್ ಶಾ ತಿಳಿಸಿದ್ದಾರೆ.
‘ಪರಿಸ್ಥಿತಿ ಶೋಚನೀಯವಾಗಿದೆ. ತಕ್ಷಣವೇ ಸರ್ಕಾರ ಮಧ್ಯಪ್ರವೇಶ ಮಾಡದಿದ್ದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಬೇಕಾದ ಒತ್ತಡಕ್ಕೆ ನಾವು ಸಿಲುಕಬೇಕಾಗಬಹುದು’ ಎಂದು ಶಾ ಹೇಳಿದ್ದಾರೆ.
2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ಬಂದ ನಂತರ ‘ಪಾರ್ಲೆ–ಜಿ’ ಸೇರಿದಂತೆ ಕಂಪನಿಯ ಇತರ ಬ್ರ್ಯಾಂಡ್ ಬಿಸ್ಕತ್ತುಗಳ ಬೇಡಿಕೆ ಕುಸಿದಿದೆ. ₹5 ಮುಖಬೆಲೆಯ ಮತ್ತು 7 ಸೆಂಟ್ಸ್ ಬಿಸ್ಕತ್ತು ಪೊಟ್ಟಣಗಳ (ಪ್ಯಾಕ್‌ಗಳ) ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದೇ ಬೇಡಿಕೆ ಕುಸಿತಕ್ಕೆ ಕಾರಣ ಎಂದುಮಯಂಕ್ ಶಾ ತಿಳಿಸಿದ್ದಾರೆ.
ಪಾರ್ಲೆಯ ಒಟ್ಟು ಆದಾಯದ ಅರ್ಧದಷ್ಟು ಗ್ರಾಮೀಣ ಭಾಗದಿಂದಲೇ ಸಂಗ್ರಹವಾಗುತ್ತಿದೆ. ಹೆಚ್ಚಿನ ತೆರಿಗೆಯಿಂದಾಗಿ ಪೊಟ್ಟಣಗಳಲ್ಲಿ ಬಿಸ್ಕತ್ತುಗಳ ಸಂಖ್ಯೆ ಕಡಿಮೆ ಮಾಡಬೇಕಾಯಿತು. ಇದು ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕುಸಿತಕ್ಕೆ ಕಾರಣವಾಯಿತು. ‘ಗ್ರಾಮೀಣ ಪ್ರದೇಶಗಳ ಗ್ರಾಹಕರು ದರವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಿರ್ದಿಷ್ಟ ದರಕ್ಕೆ ಎಷ್ಟು ಬಿಸ್ಕತ್ತು ದೊರೆಯುತ್ತದೆ ಎಂಬ ಲೆಕ್ಕಾಚಾರ ಹಾಕುತ್ತಾರೆ’ ಎಂದೂ ಶಾ ಹೇಳಿದ್ದಾರೆ.
ಇದನ್ನೂ ಓದಿ:ಜಿಎಸ್‌ಟಿ ಸಂಗ್ರಹ ಅಲ್ಪ ಹೆಚ್ಚಳ
ತೆರಿಗೆ ದರವನ್ನು ಮರುಪರಿಶೀಲಿಸುವಂತೆ ಪಾರ್ಲೆ ಕಂಪನಿಯು ಕಳೆದ ವರ್ಷ ಜಿಎಸ್‌ಟಿ ಮಂಡಳಿಗೆ ಮನವಿ ಮಾಡಿತ್ತು. ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆಗೂ ಮಾತುಕತೆ ನಡೆಸಿತ್ತು ಎಂದು ಶಾ ತಿಳಿಸಿದ್ದಾರೆ.
ಪ್ರಸ್ತುತ 1.4 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಪಾರ್ಲೆ ಕಂಪನಿ 1929ರಲ್ಲಿ ಸ್ಥಾಪನೆಯಾಗಿದೆ. ಕಂಪನಿಯು 10 ಘಟಕಗಳಲ್ಲಿ ಹಾಗೂ ಗುತ್ತಿಗೆ ನೀಡಲಾಗಿರುವ 125 ಉತ್ಪಾದನಾ ಘಟಕಗಳಲ್ಲಿ ನೇರ, ಪರೋಕ್ಷವಾಗಿ ಸುಮಾರು 1 ಲಕ್ಷ ಜನರಿಗೆ ಉದ್ಯೋಗ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.