ADVERTISEMENT

ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಪಿಟಿಐ
Published 19 ಮಾರ್ಚ್ 2024, 14:12 IST
Last Updated 19 ಮಾರ್ಚ್ 2024, 14:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಟೋಕಿಯೊ: ಜಪಾನ್‌ನಲ್ಲಿ ಎಂಟು ವರ್ಷಗಳ ಕಾಲ ಕಾಯ್ದುಕೊಂಡಿದ್ದ ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿದ್ದು, ಶೇ 0.1ರಷ್ಟು ಬಡ್ಡಿದರ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಜಪಾನ್‌ ಮಂಗಳವಾರ ತಿಳಿಸಿದೆ.

ಹಾಗಾಗಿ, 17 ವರ್ಷಗಳ ಬಳಿಕ ಸಾಮಾನ್ಯ ಠೇವಣಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಲು ಅಲ್ಲಿನ ಬ್ಯಾಂಕ್‌ಗಳು ಮುಂದಾಗಿವೆ.  

ADVERTISEMENT

ಋಣಾತ್ಮಕ ಬಡ್ಡಿದರ ನೀತಿ ಪಾಲಿಸುತ್ತಿರುವ ವಿಶ್ವದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಜಪಾನ್‌ ಪಾತ್ರವಾಗಿತ್ತು. ಶೇ –0.1ರಷ್ಟು ಬಡ್ಡಿದರ ಕಾಯ್ದುಕೊಂಡಿತ್ತು. ಸದ್ಯ ಕೇಂದ್ರೀಯ ಬ್ಯಾಂಕ್‌ನಲ್ಲಿ ಇಡುವ ಠೇವಣಿಗೆ ಶೇ 0.1ರಷ್ಟು ಬಡ್ಡಿದರ ಹೆಚ್ಚಿಸಲಾಗಿದೆ. 

ಜಪಾನ್‌ ಆರ್ಥಿಕ ಹಿಂಜರಿಕೆಗೆ ಸಿಲುಕಿದೆ. ಹಣದುಬ್ಬರವನ್ನು ನಿಯಂತ್ರಿಸುವುದು ಅಲ್ಲಿನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ, ಬಡ್ಡಿದರ ಹೆಚ್ಚಳಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. 

ಕೇಂದ್ರೀಯ ಬ್ಯಾಂಕ್‌ನ ಈ ಘೋಷಣೆ ಬೆನ್ನಲ್ಲೇ ದೇಶದ ಪ್ರಮುಖ ಹಣಕಾಸು ಸಂಸ್ಥೆಗಳಾದ ಎಂಯುಎಫ್‌ಜಿ ಬ್ಯಾಂಕ್‌ ಹಾಗೂ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್‌, ಸಾಮಾನ್ಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.001ರಿಂದ ಶೇ 0.02ಕ್ಕೆ ಹೆಚ್ಚಿಸಲು ನಿರ್ಧರಿಸಿವೆ.

2007ರ ಬಳಿಕ ಈ ಎರಡು ಬ್ಯಾಂಕ್‌ಗಳು ಮೊದಲ ಬಾರಿಗೆ ಬಡ್ಡಿದರ ಹೆಚ್ಚಿಸಲಿವೆ. ಅಲ್ಲದೆ, ಮಿಜುಹೊ ಹಾಗೂ ರೆಸೋನಾ ಹೋಲ್ಡಿಂಗ್ಸ್ ಬ್ಯಾಂಕ್‌ ಕೂಡ ಬಡ್ಡಿದರ ಹೆಚ್ಚಿಸುವ ಸುಳಿವು ನೀಡಿವೆ.

‘ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿರುವುದು ಬ್ಯಾಂಕಿಂಗ್‌ ವಲಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹೊಸ ನೀತಿಯು ಬ್ಯಾಂಕ್‌ಗಳ ನಿವ್ವಳ ಬಡ್ಡಿ ಆದಾಯ ಹೆಚ್ಚಳಕ್ಕೆ ಪೂರಕವಾಗಿದೆ’ ಎಂದು ಮಿಜುಹೊ ಹಣಕಾಸು ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಮಸಾಹಿರೋ ಕಿಹರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.