ADVERTISEMENT

ಅಡಮಾನರಹಿತ ವೈಯಕ್ತಿಕ ಸಾಲ ನಿಯಮದಲ್ಲಿ ಬದಲಾವಣೆ; ಮುನ್ನೆಚ್ಚರಿಕೆಯ ಕ್ರಮ –ದಾಸ್

ಪಿಟಿಐ
Published 22 ನವೆಂಬರ್ 2023, 15:51 IST
Last Updated 22 ನವೆಂಬರ್ 2023, 15:51 IST
<div class="paragraphs"><p>ಶಕ್ತಿಕಾಂತ ದಾಸ್</p></div>

ಶಕ್ತಿಕಾಂತ ದಾಸ್

   

– ಪಿಟಿಐ ಚಿತ್ರ

ಮುಂಬೈ: ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಎದುರಾಗಬಹುದಾದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಹೆಜ್ಜೆಯಾಗಿ ಅಡಮಾನರಹಿತ ವೈಯಕ್ತಿಕ ಸಾಲ ನೀಡಿಕೆಯ ನಿಯಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ಹೇಳಿದ್ದಾರೆ.

ADVERTISEMENT

ಬ್ಯಾಂಕಿಂಗ್ ವ್ಯವಸ್ಥೆಯ ಚೇತರಿಕೆಯು ಮುಂದುವರಿಯಲಿದೆ. ವ್ಯವಸ್ಥೆಗೆ ತಕ್ಷಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅವರು ಹೇಳಿದ್ಧಾರೆ. ಬಹಳ ಎಚ್ಚರಿಕೆಯಿಂದ ಇದ್ದು, ಯಾವುದಾದರೂ ಅಪಾಯ ಎದುರಾಗುತ್ತಿದೆಯೇ ಎನ್ನುವುದನ್ನು ಮುಂಚಿತವಾಗಿಯೇ ಪತ್ತೆ ಮಾಡುವಂತೆ ಹಣಕಾಸು ಸಂಸ್ಥೆಗಳಿಗೆ ಅವರು ಸಲಹೆ ನೀಡಿದ್ದಾರೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಫಿಕ್ಕಿ) ಮತ್ತು ಭಾರತೀಯ ಬ್ಯಾಂಕ್‌ಗಳ ಒಕ್ಕೂಟ (ಐಬಿಎ) ಆಯೋಜಿಸಿದ್ದ ಎಫ್‌ಐಬಿಎಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಿರವಾಗಿ ಇರಿಸುವ ಉದ್ದೇಶದಿಂದ ಮುನ್ನೆಚ್ಚರಿಕೆಯ ಭಾಗವಾಗಿ ಈಚೆಗೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ)  ಅಡಮಾನರಹಿತ ವೈಯಕ್ತಿಕ ಸಾಲ ನೀಡುವುದರಿಂದ ಆಗಬಹುದಾದ ನಷ್ಟವನ್ನು ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವನ್ನು (ರಿಸ್ಕ್‌ ವೇಯ್ಟ್‌) ಈಗಿರುವ ಶೇ 100ರಿಂದ ಶೇ 125ಕ್ಕೆ ಆರ್‌ಬಿಐ ಹೆಚ್ಚಿಸಿದೆ. ಈ ಕುರಿತು ಅವರು ವಿವರಿಸಿದ್ದಾರೆ.

ಗೃಹ, ವಾಹನ ಮತ್ತು ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವುದಕ್ಕೆ ನೀಡುವ ಸಾಲಗಳನ್ನು ಈ ನಿಯಮದಿಂದ ಹೊರಗಿಡಲಾಗಿದೆ. ಈ ರೀತಿಯ ಸಾಲಗಳನ್ನು ನೀಡುವುದರಿಂದ ಆಗಲಿರುವ ಪ್ರಯೋಜನವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ಈ ರೀತಿಯ ಸಾಲಗಳಿಂದ ಅಪಾಯ ಎದುರಾಗುವ ಸಾಧ್ಯತೆ ಕಡಿಮೆ ಎಂದು ದಾಸ್ ಹೇಳಿದ್ದಾರೆ.

ಅಪಾಯ ನಿರ್ವಹಿಸುವ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವಂತೆ ಮತ್ತು ಯಾವುದೇ ರೀತಿಯ ಅಡಚಣೆಗಳನ್ನು ಎದುರಿಸಲು ಸಜ್ಜಾಗುವಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ಧಾರೆ. ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಆರ್‌ಬಿಐ ಇನ್ನಷ್ಟು ಬಲಪಡಿಸಿದೆ ಎಂದೂ ತಿಳಿಸಿದ್ಧಾರೆ.

ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ಸ್ಥಿತಿ ಉತ್ತಮವಾಗಿದೆ. ಇಂತಹ ಸಂದರ್ಭದಲ್ಲಿ ಅಪಾಯವು ಎಲ್ಲಿಂದ ಎದುರಾಗಬಹುದು ಎನ್ನುವುದನ್ನು ಪರಿಶೀಲಿಸಿಕೊಳ್ಳುವ ಅಗತ್ಯ ಇದೆ ಎಂದು ದಾಸ್‌ ಸಲಹೆ ನೀಡಿದ್ದಾರೆ.

‘ಬಡ್ಡಿ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಿ’

ಬಡ್ಡಿದರದ ವಿಚಾರದಲ್ಲಿ ವಿಚೇಚನೆಯಿಂದ ವರ್ತಿಸುವಂತೆ ಎನ್‌ಬಿಎಫ್‌ಸಿ ಮತ್ತು ಕಿರು ಹಣಕಾಸು ಸಂಸ್ಥೆಗಳಿಗೆ ದಾಸ್‌ ಸೂಚನೆ ನೀಡಿದ್ದಾರೆ. ಬಡ್ಡಿ ದರಗಳು ನಿಯಂತ್ರಣಕ್ಕೆ ಒಳಪಡದೇ ಇದ್ದರೂ ಕೆಲವು ಎನ್‌ಬಿಎಫ್‌ಸಿ ಮತ್ತು ಕಿರು ಹಣಕಾಸು ಸಂಸ್ಥೆಗಳು ಗರಿಷ್ಠ ಬಡ್ಡಿ ವಿಧಿಸುವ ಮೂಲಕ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ.

ಹೀಗಾಗಿ ಕಿರು ಹಣಕಾಸು ಸಂಸ್ಥೆಗಳು ಬಡ್ಡಿದರ ನಿಗದಿಪಡಿಸುವಾಗ ವಿವೇಚನೆಯಿಂದ ವರ್ತಿಸುವ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಡ್ಡಿದರ ನಿಗದಿಪಡಿಸುವಾಗ ಸಾಲ ಪಡೆಯವವರ ಮರುಪಾವತಿ ಸಾಮರ್ಥ್ಯವನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ದಾಸ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.