ನವದೆಹಲಿ: ಟೊಯೊಟ, ಹುಂಡೈ ಮೋಟರ್, ಮಹೀಂದ್ರ ಆ್ಯಂಡ್ ಮಹೀಂದ್ರ, ಟಾಟಾ ಮೋಟರ್ಸ್, ಮಾರುತಿ ಸುಜುಕಿ ಸೇರಿದಂತೆ ದೇಶದ ಪ್ರಮುಖ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟವು ಮಾರ್ಚ್‌ನಲ್ಲಿ ಏರಿಕೆ ಕಂಡಿದೆ.
ದೇಶೀಯ ವಾಹನಗಳ ಮಾರಾಟದಲ್ಲಿ ಪ್ರಗತಿ ದಾಖಲಿಸಿದ್ದು, ರಫ್ತು ಉತ್ತಮವಾಗಿದೆ. ಗ್ರಾಹಕರಿಂದ ಹೆಚ್ಚಿದ ಬೇಡಿಕೆ ಮತ್ತು ಮಾರುಕಟ್ಟೆಗೆ ಹೊಸ ವಾಹನಗಳ ಬಿಡುಗಡೆಯಿಂದ ಮಾರಾಟದಲ್ಲಿ ಏರಿಕೆ ಆಗಿದೆ.
ಟೊಯೊಟ ವಾಹನ ಮಾರಾಟ ಹೆಚ್ಚಳ: ಟೊಯೊಟ ಕಿರ್ಲೋಸ್ಕರ್ ಮೋಟರ್‌ನ 27,180 ವಾಹನಗಳು ಮಾರ್ಚ್‌ನಲ್ಲಿ ಮಾರಾಟವಾಗಿವೆ. 2023–24ರ ಹಣಕಾಸು ವರ್ಷದಲ್ಲಿ 2.63 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಹಿಂದಿನ ಇದೇ ಅವಧಿಯಲ್ಲಿ 1.77 ಲಕ್ಷ ವಾಹನಗಳು ಮಾರಾಟವಾಗಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 48ರಷ್ಟು ಏರಿಕೆ ಆಗಿದೆ.
ಹುಂಡೈ ಮಾರಾಟ ಶೇ 7ರಷ್ಟು ಏರಿಕೆ: ಹುಂಡೈ ಮೋಟರ್ ಇಂಡಿಯಾದ ಒಟ್ಟು 65,601 ವಾಹನಗಳು ಮಾರಾಟವಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 61,500 ವಾಹನಗಳು ಮಾರಾಟವಾಗಿವೆ. ಇದಕ್ಕೆ ಹೋಲಿಸಿದರೆ ಶೇ 7ರಷ್ಟು ಏರಿಕೆ ಆಗಿದೆ. ದೇಶೀಯ ವಾಹನ ಮಾರಾಟ ಶೇ 5 ಮತ್ತು ರಫ್ತು ಶೇ 16ರಷ್ಟು ಹೆಚ್ಚಳ ಆಗಿದೆ. 2023–24ರ ಹಣಕಾಸು ವರ್ಷದಲ್ಲಿ 7.77 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 7.20 ಲಕ್ಷ ವಾಹನಗಳು ಮಾರಾಟವಾಗಿವೆ.
ಮಹೀಂದ್ರ ಮಾರಾಟ ಶೇ 4ರಷ್ಟು ಹೆಚ್ಚಳ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ 68,413 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 66,041 ವಾಹನಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ 4ರಷ್ಟು ಏರಿಕೆ ಆಗಿದೆ.
ದೇಶೀಯ ಮಾರಾಟದಲ್ಲಿ ಶೇ 13ರಷ್ಟು ಏರಿಕೆಯಾಗಿದ್ದರೆ, ರಫ್ತು ಶೇ 26ರಷ್ಟು ಇಳಿಕೆ ಆಗಿದೆ. 2023–24ರ ಹಣಕಾಸು ವರ್ಷದಲ್ಲಿ 4.59 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಹಿಂದಿನ ಇದೇ ಅವಧಿಯಲ್ಲಿ 3.59 ಲಕ್ಷ ವಾಹನಗಳು ಮಾರಾಟವಾಗಿವೆ. ಶೇ 28ರಷ್ಟು ಏರಿಕೆ ಆಗಿದೆ.
ಟಾಟಾ ಮೋಟರ್ಸ್ ಏರಿಕೆ: ಟಾಟಾ ಮೋಟರ್ಸ್ ದೇಶೀಯ ವಾಹನ ಮಾರಾಟ ಶೇ 2ರಷ್ಟು ಹೆಚ್ಚಳವಾಗಿದೆ. ಹಿಂದಿನ ಇದೇ ಅವಧಿಯಲ್ಲಿ 89,351 ವಾಹನಗಳು ಮಾರಾಟವಾಗಿದ್ದರೆ, ಪ್ರಸಕ್ತ ಅವಧಿಯಲ್ಲಿ 90,822 ಮಾರಾಟವಾಗಿವೆ.
ದೇಶೀಯ ವಾಣಿಜ್ಯ ವಾಹನ ಮಾರಾಟ ಶೇ 10ರಷ್ಟು ಇಳಿಕೆಯಾಗಿ, 40,712 ವಾಹನಗಳು ಮಾರಾಟವಾಗಿವೆ. 2023–24ರಲ್ಲಿ 9.49 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಹಿಂದಿನ ಇದೇ ಅವಧಿಯಲ್ಲಿ 9.31 ಲಕ್ಷ ಮಾರಾಟವಾಗಿದ್ದವು.
ಮಾರುತಿ ಸುಜುಕಿ ಮಾರಾಟ ಏರಿಕೆ: ಮಾರುತಿ ಸುಜುಕಿ ಇಂಡಿಯಾ ವಾಹನ ಮಾರಾಟವು ಶೇ 10ರಷ್ಟು ಏರಿಕೆ ಆಗಿದ್ದು 1.87 ಲಕ್ಷ ವಾಹನ ಮಾರಾಟವಾಗಿವೆ. ಹಿಂದಿನ ಇದೇ ಅವಧಿಯಲ್ಲಿ 1.70 ಲಕ್ಷ ಮಾರಾಟವಾಗಿದ್ದವು.
2023–24ರಲ್ಲಿ ದೇಶೀಯ ಪ್ರಯಾಣಿಕ ವಾಹನದ ಒಟ್ಟು ಮಾರಾಟವು 17.93 ಲಕ್ಷವಿದ್ದರೆ ಮತ್ತು ರಫ್ತು 2.83 ಲಕ್ಷವಿದೆ. ಕಳೆದ ಅವಧಿಗೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ವಾಹನ ಮಾರಾಟ ಶೇ 9ರಷ್ಟು ಹೆಚ್ಚಳ ಕಂಡಿದೆ ಎಂದು ಕಂಪನಿ ತಿಳಿಸಿದೆ.
ಎಂ.ಜಿ ಮೋಟರ್ ಮಾರಾಟ ಇಳಿಕೆ: ಎಂ.ಜಿ ಮೋಟರ್ ಇಂಡಿಯಾದ ವಾಹನ ಮಾರಾಟವು ಶೇ 23ರಷ್ಟು ಇಳಿಕೆ ಆಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ 6,051 ವಾಹನಗಳು ಮಾರಾಟವಾಗಿದ್ದರೆ, ಈ ಮಾರ್ಚ್‌ನಲ್ಲಿ 4,648 ಮಾರಾಟವಾಗಿವೆ.
ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023–24ರ ವಾಹನ ಮಾರಾಟದಲ್ಲಿ ಶೇ 14ರಷ್ಟು ಬೆಳವಣಿಗೆ ಆಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.