ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತೀಯ ಆಟಿಕೆಗಳಿಗೆ ಬೇಡಿಕೆ ಕುಗ್ಗಿರುವುದರಿಂದ, ರಫ್ತು ಪ್ರಮಾಣವು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2021–22ರಲ್ಲಿ ಭಾರತವು ₹1,500 ಕೋಟಿ ಮೌಲ್ಯದ ಆಟಿಕೆಗಳನ್ನು ರಫ್ತು ಮಾಡಿತ್ತು. 2023–24ರಲ್ಲಿ ₹1,300 ಕೋಟಿ ಮೌಲ್ಯದ ಆಟಿಕಗಳನ್ನು ರಫ್ತು ಮಾಡಿದೆ.
‘ಭಾರತವು ಪ್ರಮುಖವಾಗಿ ಅಮೆರಿಕ, ಬ್ರಿಟನ್ ಮತ್ತು ಜರ್ಮನಿಗೆ ರಫ್ತು ಮಾಡುತ್ತದೆ. ಈ ರಾಷ್ಟ್ರಗಳಲ್ಲಿ ಶೇ 16ರಿಂದ ಶೇ 20ರಷ್ಟು ಬೇಡಿಕೆ ಕಡಿಮೆಯಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಜಾಗತಿಕ ಮಟ್ಟದ ಆಟಿಕೆಗಳ ಮಾರುಕಟ್ಟೆಯಲ್ಲಿ ಭಾರತದ ಪಾಲು ತೀರಾ ಕಡಿಮೆಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ಬೇಡಿಕೆಯನ್ನು ಅವಲೋಕಿಸಿದರೆ ದೇಶದಿಂದ ಆಗುವ ಆಟಿಕೆಗಳ ರಫ್ತಿನ ಪ್ರಮಾಣ ಶೇ 0.3ರಷ್ಟಿದೆ. ಆಟಿಕೆ ಉದ್ದಿಮೆ ವಲಯದಲ್ಲಿ ರಫ್ತಿಗೆ ಬಹಳಷ್ಟು ಅವಕಾಶವಿದ್ದರೂ, ನಿರೀಕ್ಷಿತ ಗುರಿ ಸಾಧನೆಯಾಗುತ್ತಿಲ್ಲ ಎನ್ನುವುದು ಮಾರುಕಟ್ಟೆ ತಜ್ಞರ ಹೇಳಿಕೆ.
ದೇಶೀಯ ಆಟಿಕೆ ಉದ್ಯಮದ ಬೆಳವಣಿಗೆಗೆ ಕೇಂದ್ರ ಸರ್ಕಾರ ಹಲವು ಕ್ರಮಕೈಗೊಂಡಿದೆ. ದೇಶೀಯ ತಯಾರಕರಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. 2020ರಲ್ಲಿ ಆಮದು ಆಟಿಕೆಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ 20ರಿಂದ 60ಕ್ಕೆ ಹೆಚ್ಚಿಸಿದೆ. ಗುಣಮಟ್ಟ ನಿಯಂತ್ರಣ ಆದೇಶ ಪಾಲನೆಗೆ ಸೂಚಿಸಿದೆ.
ರಫ್ತು ಇಳಿಕೆಗೆ ಕಾರಣ ಏನು?
ಜಾಗತಿಕ ಬಿಕ್ಕಟ್ಟುಗಳು ಭಾರತೀಯ ಆಟಿಕೆ ಉದ್ದಿಮೆ ವಲಯದ ಮೇಲೆ ಗಂಭೀರ ಪರಿಣಾಮ ಬೀರಿವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದಾಗಿ ಕೆಂಪು ಸಮುದ್ರದಲ್ಲಿ ಸರಕು ಸಾಗಣೆಗೆ ದೊಡ್ಡ ಅಡಚಣೆಯಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿಯೂ ಆಟಿಕೆಗಳ ಬೇಡಿಕೆ ಕುಗ್ಗಿದೆ ಎಂದು ಸಚಿವ ಜಿತಿನ್ ಪ್ರಸಾದ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.