ನವದೆಹಲಿ: ಮೊಬೈಲ್ ದೂರಸಂಪರ್ಕ ಕಂಪನಿಗಳು ನೀಡುತ್ತಿರುವ ವಿವಿಧ ಯೋಜನೆಗಳು ಗ್ರಾಹಕರ ಬಹುಬಗೆಯ ಅಗತ್ಯಗಳನ್ನು ಪೂರೈಸುವಂತೆ ಇವೆಯೇ ಎಂಬುದನ್ನು ತಿಳಿಯಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಸಮೀಕ್ಷೆಯೊಂದನ್ನು ನಡೆಸುವ ಚಿಂತನೆಯಲ್ಲಿದೆ.
ಈ ಸಮೀಕ್ಷೆ ನಡೆಸಲು ಏಜೆನ್ಸಿಯೊಂದನ್ನು ಟ್ರಾಯ್ ಗೊತ್ತುಮಾಡಿಕೊಳ್ಳಬಹುದು. ಸಮೀಕ್ಷೆಯು ಶೀಘ್ರದಲ್ಲಿಯೇ ಶುರುವಾಗುವ ನಿರೀಕ್ಷೆ ಇದೆ ಎಂದು ಟ್ರಾಯ್ ಅಧಿಕಾರಿಯೊಬ್ಬರು ತಿಳಿಸಿದರು.
ಕಂಪನಿಗಳು ರೂಪಿಸಿರುವ ಯೋಜನೆಗಳು ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಇರಬೇಕು. ಧ್ವನಿ ಕರೆಗಳ ಸೇವೆಯನ್ನು ಹೆಚ್ಚಾಗಿ ಬಳಸುವವರಿಗೂ, ಇಂಟರ್ನೆಟ್ ಹೆಚ್ಚಾಗಿ ಬಳಸುವವರಿಗೂ ಹೊಂದಿಕೆ ಆಗುವಂತೆ ಇರಬೇಕು. ನಿರ್ದಿಷ್ಟ ಬಗೆಯ ಯೋಜನೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಒತ್ತಡವು ಗ್ರಾಹಕರ ಮೇಲೆ ಇರಬಾರದು ಎಂದು ಅಧಿಕಾರಿಯೊಬ್ಬರು ಈ ಸಮೀಕ್ಷೆಯ ಉದ್ದೇಶದ ಕುರಿತು ವಿವರಣೆ ನೀಡಿದರು.
ಫೀಚರ್ ಫೋನ್‌ಗಳನ್ನು ಬಳಸುವವರು ಸೇರಿದಂತೆ ಬೇರೆ ಬೇರೆ ವರ್ಗಗಳ ಗ್ರಾಹಕರ ಬೇಡಿಕೆಗಳು ಬೇರೆ ಬೇರೆಯಾಗಿ ಇದ್ದರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಯೋಜನೆಗಳು ಒಂದೇ ಸ್ವರೂಪದಲ್ಲಿ ಇವೆಯೇ ಎಂಬುದನ್ನು ಕಂಡುಕೊಳ್ಳುವ ಉದ್ದೇಶ ಕೂಡ ಟ್ರಾಯ್‌ಗೆ ಇದೆ.
ಸಮೀಕ್ಷೆ ಹೇಗಿರಬೇಕು, ಯಾವ ಮಾಧ್ಯಮದ ಮೂಲಕ ಸಮೀಕ್ಷೆಯನ್ನು ನಡೆಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ವಿವರಿಸಿವೆ.
ಈಗ ಜಾರಿಯಲ್ಲಿ ಇರುವ ನಿಯಮಗಳ ಪ್ರಕಾರ, ಮೊಬೈಲ್ ದೂರಸಂಪರ್ಕ ಸೇವಾ ಕಂಪನಿಗಳು ತಮ್ಮ ಸೇವಾ ಶುಲ್ಕಗಳನ್ನು ನಿಗದಿ ಮಾಡುವ ವಿಚಾರದಲ್ಲಿ ಮುಕ್ತ ಸ್ವಾತಂತ್ರ್ಯ ಹೊಂದಿವೆ. ಆದರೆ ಅವು ಯಾವುದೇ ಹೊಸ ಯೋಜನೆ ಜಾರಿಗೆ ತಂದ ಒಂದು ವಾರದಲ್ಲಿ ಅದರ ಬಗ್ಗೆ ಟ್ರಾಯ್‌ಗೆ ಮಾಹಿತಿ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.