ನವದೆಹಲಿ (ಪಿಟಿಐ): ಅಪರಿಚಿತರಿಂದ ಕರೆ ಬಂದಾಗ ಅದು ಯಾರಿಂದ ಬಂತು ಎಂದು ಪರಿಶೀಲಿಸಲು ಯಾವುದೋ ಆ್ಯಪ್‌ಗಳನ್ನು ನೆಚ್ಚಿಕೊಂಡಿದ್ದೀರಾ?! ಅಂತಹ ಪರಿಸ್ಥಿತಿ ತಪ್ಪಿಸಲು ಹೊಸ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮುಂದಾಗಿದೆ.
ಸಿಮ್ ಖರೀದಿಸುವಾಗ ಗ್ರಾಹಕರು ಸಲ್ಲಿಸುವ ಕೆವೈಸಿ ದಾಖಲೆಗಳಲ್ಲಿ ಇರುವ ಹೆಸರೇ, ಅವರು ಇತರರಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸುವ ವ್ಯಕ್ತಿಯ ಮೊಬೈಲ್ ಪರದೆಯ ಮೇಲೆ ಕಾಣಿಸಿಕೊಳ್ಳುವಂತೆ ಆಗಬೇಕು ಎಂಬುದು ಟ್ರಾಯ್ ಉದ್ದೇಶ. ಇದಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ರೂಪಿಸಲು ಟ್ರಾಯ್ ಶೀಘ್ರದಲ್ಲಿಯೇ ಸಮಾಲೋಚನೆ ಆರಂಭಿಸಲಿದೆ.
ಸಮಾಲೋಚನೆ ಶುರು ಮಾಡುವಂತೆ ಟ್ರಾಯ್‌ಗೆ ಕೇಂದ್ರ ದೂರಸಂಪರ್ಕ ಇಲಾಖೆಯಿಂದ ಸೂಚನೆ ಸಹ ಬಂದಿದೆ. ಇನ್ನು ಎರಡು ತಿಂಗಳಲ್ಲಿ ಸಮಾಲೋಚನೆ ಶುರುವಾಗಲಿದೆ ಎಂದು ಟ್ರಾಯ್ ಅಧ್ಯಕ್ಷ ಪಿ.ಡಿ. ವಘೇಲಾ ತಿಳಿಸಿದ್ದಾರೆ.
ಕರೆ ಮಾಡಿದವರ ಹೆಸರು ಏನು ಎಂಬುದನ್ನು ತಿಳಿಸುವ ಕೆಲವು ಆ್ಯಪ್‌ಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಿಗುತ್ತಿವೆ. ಆದರೆ ಅವು ನಿಖರವಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.