ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪ ಕೇಳಿಬಂದ ಬೆನ್ನಲ್ಲೇ ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಾದ ಮೂಡಿಸ್ ಹಾಗೂ ಫಿಚ್, ಅದಾನಿ ಸಮೂಹದ ಕಂಪನಿಗಳಿಗೆ ನೀಡಿದ್ದ ಮುನ್ನೋಟದ ರೇಟಿಂಗ್ಸ್ ಅನ್ನು ಪರಿಷ್ಕರಿಸಿವೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಹಾಗೂ ಅದಾನಿ ಪೋರ್ಟ್ ಕಂಪನಿಯನ್ನು ‘ಸ್ಥಿರ’ ರೇಟಿಂಗ್ ಪಟ್ಟಿಯಿಂದ ‘ಋಣಾತ್ಮಕ’ ಪಟ್ಟಿಗೆ ಸೇರಿಸಿವೆ.
ಏಳು ಕಂಪನಿಗಳಿಗೆ ಮೂಡಿಸ್ ಕಡಿಮೆ ರೇಟಿಂಗ್ ನೀಡಿದೆ.
ಮೂಡಿಸ್ ನೀಡಿರುವ ಋಣಾತ್ಮಕ ಪಟ್ಟಿಯಲ್ಲಿ ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಎಲೆಕ್ಟ್ರಿಸಿಟಿ, ಅದಾನಿ ಪೋರ್ಟ್ ಮತ್ತು ಅದಾನಿ ಇಂಟರ್‌ನ್ಯಾಷನಲ್ ಕಂಟೈನರ್ ಸೇರಿವೆ.
ಫಿಚ್ ಸಂಸ್ಥೆಯು ಅದಾನಿ ಇಂಟರ್‌ನ್ಯಾಷನಲ್ ಕಂಟೈನರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸಲ್ಯೂಷನ್ ಕಂಪನಿಯನ್ನು ಋಣಾತ್ಮಕ ಪಟ್ಟಿಗೆ ಸೇರಿಸಿದೆ. ಇದು ಅದಾನಿ ಕಂಪನಿಗಳ ವಹಿವಾಟು ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಾಗೂ ಅದಾನಿ ಸಮೂಹದ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಕುರಿತು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಒಪ್ಪಂದ ರದ್ದುಪಡಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಪಯ್ಯಾವುಳ ಕೇಶವ ತಿಳಿಸಿದ್ದಾರೆ. ಅದಾನಿ ಸಮೂಹವು ಹಿಂದಿನ ಸರ್ಕಾರದಲ್ಲಿ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಸರ್ಕಾರಿ ಅಧಿಕಾರಿಗಳಿಗೆ ₹1750 ಕೋಟಿ ಲಂಚ ನೀಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.