ನವದೆಹಲಿ: ಟಿವಿಎಸ್ ಮೋಟರ್ ಕಂಪನಿಯು ಮುಂದಿನ ಒಂದು ವರ್ಷದಲ್ಲಿ ತನ್ನ ವಿದ್ಯುತ್ ಚಾಲಿತ (ಇ.ವಿ) ದ್ವಿಚಕ್ರ ವಾಹನಗಳ ವಿಧಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವಿವಿಧ ದರಗಳಲ್ಲಿ ಗ್ರಾಹಕರಿಗೆ ವಾಹನ ಪೂರೈಸುವುದು ತಮ್ಮ ಉದ್ದೇಶ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೆನ್ನೈ ಮೂಲದ ಕಂಪನಿಯು, ಪ್ರಸ್ತುತ ಎರಡು ಇ–ಸ್ಕೂಟರ್‌ಗಳನ್ನು ಹೊಂದಿದೆ. ಮುಂದೆ ತನ್ನ ಎಲೆಕ್ಟ್ರಿಕ್ ವಾಹನ ಮಾರಾಟ ಮೂಲಸೌಕರ್ಯ ವಿಸ್ತರಿಸಲು ಯೋಜಿಸಿದೆ.
ಮುಂದಿನ ವರ್ಷದಲ್ಲಿ 5–25 ಕಿಲೋ ವ್ಯಾಟ್ ಶ್ರೇಣಿಯ ವಾಹನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದೇವೆ ಎಂದು ಟಿವಿಎಸ್ ಮೋಟರ್ ಕಂಪನಿಯ ನಿರ್ದೇಶಕ ಮತ್ತು ಸಿಇಒ ಕೆ.ಎನ್.ರಾಧಾಕೃಷ್ಣನ್ ತಿಳಿಸಿದ್ದಾರೆ. ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್‌ನ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 25 ಸಾವಿರಕ್ಕೆ ಹೆಚ್ಚಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವ ಯೋಜನೆ ಇದೆ ಎಂದರು.
ಟಿವಿಎಸ್ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಎಕ್ಸ್ ಮಾರಾಟವನ್ನು ಪ್ರಸಕ್ತ ತ್ರೈಮಾಸಿಕದಲ್ಲಿ ಪ್ರಾರಂಭಿಸಲು ಯೋಜಿಸಿದೆ ಎಂದ ಅವರು ಕಂಪನಿಯು ವಿದ್ಯುತ್ ಚಾಲಿತ ತ್ರಿಚಕ್ರ ವಾಹನವನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.