ವಾಷಿಂಗ್ಟನ್: ಟ್ವಿಟರ್‌ನ ಸಹ ಸಂಸ್ಥಾಪಕ,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಜಾಕ್ ಡೋರ್ಸಿ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.
ಟ್ವಿಟರ್‌ನ ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿ ಪರಾಗ್ ಅಗರವಾಲ್ ಸಿಇಒ ಸ್ಥಾನ ವಹಿಸಿಕೊಳ್ಳಲಿದ್ದಾರೆ.
ಡೋರ್ಸಿ ಅವರ ನಿರ್ಗಮನಕ್ಕೆ ಕಂಪನಿಯ ಆಡಳಿತ ಮಂಡಳಿಯು ವರ್ಷದಿಂದ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಫೇಸ್‌ಬುಕ್ ಮತ್ತು ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ಮತ್ತು 2023 ರ ವೇಳೆಗೆ ವಾರ್ಷಿಕ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ತಲುಪಲು ಟ್ವಿಟರ್ ಕಳೆದ ವರ್ಷ ತನ್ನ ಉತ್ಪನ್ನದ ಆವಿಷ್ಕಾರದ ವೇಗವನ್ನು ಹೆಚ್ಚಿಸಲಾರಂಭಿಸಿತ್ತು. ಈ ಮಧ್ಯೆ ಡೋರ್ಸಿ ನಿರ್ಗಮನವಾಗಿದೆ.
ಷೇರು ಮಾರುಕಟ್ಟೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ ಟ್ವಿಟರ್‌ನ ಷೇರುಗಳು ಶೇ 9ರಷ್ಟು ಏರಿಕೆ ಕಂಡಿದ್ದವು. ಆದರೆ ಡೋರ್ಸಿ ಮುಖ್ಯ ಕಾರ್ಯನಿರ್ವಾಹಕರಾಗಿರುವ ಡಿಜಿಟಲ್ ಪಾವತಿ ಸಂಸ್ಥೆ ಸ್ಕ್ವೇರ್ ಐಎನ್‌ಸಿಯ ಷೇರುಗಳು ಶೇ 3ರಷ್ಟು ಮಾತ್ರ ಹೆಚ್ಚಾಗಿವೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು ‘ಯಾರಾದರೂ ಕೇಳಿಸಿಕೊಂಡಿದ್ದಾರಾ ಖಚಿತವಿಲ್ಲ. ಆದರೆ, ನಾನು ಟ್ವಿಟರ್‌ಗೆ ರಾಜೀನಾಮೆ ನೀಡಿದ್ದೇನೆ,‘ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ರಾಜೀನಾಮೆ ಪತ್ರವನ್ನು ಲಗತ್ತಿಸಿದ್ದಾರೆ.
ಡೋರ್ಸಿ ನ. 28ರಂದು ಟ್ವೀಟ್ ಮಾಡಿದ್ದು, ‘ನಾನು ಟ್ವಿಟರ್ ಅನ್ನು ಪ್ರೀತಿಸುತ್ತೇನೆ (I love twitter),’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ 56 ಸಾವಿರಕ್ಕೂ ಅಧಿಕ ಮೆಚ್ಚುಗೆಗಳನ್ನು ಪಡೆದಿದೆ.
ಸ್ಕ್ವೇರ್ ಐಎನ್‌ಸಿ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ಡೋರ್ಸಿ ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್‌ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್‌ಮೆಂಟ್ ಕಾರ್ಪ್ ಆರೋಪಿಸಿತ್ತು. ಅಲ್ಲದೆ, ಡೋರ್ಸಿ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.