ADVERTISEMENT

ಉತ್ಪಾದನೆ ಉತ್ತೇಜನಕ್ಕೆ ₹2 ಲಕ್ಷ ಕೋಟಿ

ಪಿಟಿಐ
Published 11 ನವೆಂಬರ್ 2020, 19:30 IST
Last Updated 11 ನವೆಂಬರ್ 2020, 19:30 IST
ಉತ್ಪಾದನೆ ಆಧಾರಿತ ಉತ್ತೇಜನಾ ಯೋಜನೆ
ಉತ್ಪಾದನೆ ಆಧಾರಿತ ಉತ್ತೇಜನಾ ಯೋಜನೆ   

ನವದೆಹಲಿ: ದೂರಸಂಪರ್ಕ, ಆಟೊಮೊಬೈಲ್‌, ಔಷಧೋದ್ಯಮ ಸೇರಿದಂತೆ ಒಟ್ಟು ಹತ್ತು ಪ್ರಮುಖ ಉದ್ಯಮ ವಲಯಗಳಿಗೆ ಅನ್ವಯವಾಗುವ ‘ಉತ್ಪಾದನೆ ಆಧಾರಿತ ಉತ್ತೇಜನಾ ಯೋಜನೆ’ಗೆ (‍ಪಿಎಲ್‌ಐ) ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ, ಪಿಎಲ್‌ಐ ಅಡಿ ಉತ್ತೇಜನದ ರೂಪದಲ್ಲಿ ಐದು ವರ್ಷಗಳಲ್ಲಿ ನೀಡುವ ಹಣದ ಮೊತ್ತವು ₹ 2 ಲಕ್ಷ ಕೋಟಿಯ ಸಮೀಪಕ್ಕೆ ಬಂದಿದೆ.

ಈ ಯೋಜನೆಯು ದೇಶಿ ಉತ್ಪಾದನೆಗೆ ಉತ್ತೇಜನ ನೀಡಲು, ಆಮದು ಪ್ರಮಾಣ ತಗ್ಗಿಸಲು ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಆಗಲಿದೆ. ಯೋಜನೆಗೆ ಈಗ ನಿಗದಿ ಮಾಡಿರುವ ಹಣಕಾಸಿನ ಅನುದಾನದ ಮೊತ್ತವು ₹1.45 ಲಕ್ಷ ಕೋಟಿ. ₹51 ಸಾವಿರ ಕೋಟಿ ಮೊತ್ತವನ್ನು ಪಿಎಲ್‌ಐ ಅಡಿ ವೆಚ್ಚ ಮಾಡಲು ಈ ಮೊದಲೇ ತೀರ್ಮಾನ ಮಾಡಲಾಗಿತ್ತು. ‘ಭಾರತದ ತಯಾರಿಕಾ ವಲಯವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಆಗಿಸಲು ಇದು ಸಹಾಯ ಮಾಡಲಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

‘ಆತ್ಮನಿರ್ಭರ ಭಾರತ’ ನಿರ್ಮಾಣದ ಗುರಿ ಸಾಧಿಸಲು ಈ ಯೋಜನೆಯು ಸಹಾಯ ಮಾಡಲಿದೆ. ತಯಾರಿಕಾ ವಲಯಕ್ಕೆ ದೊಡ್ಡ ಪ್ರಮಾಣದ ಪ್ರೋತ್ಸಾಹಧನ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ADVERTISEMENT

‘ಪಿಎಲ್‌ಐ ಯೋಜನೆಯು ಉದ್ಯೋಗ ಸೃಷ್ಟಿಗೆ ನೆರವಾಗುವುದು ಮಾತ್ರವೇ ಅಲ್ಲದೆ, ಮುಂದೆ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಲ್ಲುವ ಶಕ್ತಿ ಹೊಂದಿರುವ ಉದ್ಯಮ ವಲಯಗಳಿಗೆ ಉತ್ತೇಜನಕಾರಿಯಾಗಿ ಇರಲಿದೆ’ ಎಂದು ನಿರ್ಮಲಾ ತಿಳಿಸಿದರು. ‘ಪಿಎಲ್‌ಐ ಯೋಜನೆಯ ಉದ್ದೇಶ ದೇಶಕ್ಕೆ ಹೂಡಿಕೆಯನ್ನು ತರುವುದು. ಭಾರತದಲ್ಲಿ ಉತ್ಪಾದನಾ ಚಟುವಟಿಕೆ ನಡೆಸುವುದು ಆಕರ್ಷಕವಾಗಿರಬೇಕು ಎಂಬ ಉದ್ದೇಶದಿಂದ ಈ ರೀತಿಯ ಹಣಕಾಸಿನ ನೆರವು ಪ್ರಕಟಿಸಲಾಗಿದೆ’ ಎಂದು ನಿರ್ಮಲಾ
ವಿವರಿಸಿದರು.

ಉದ್ಯಮದ ಸ್ವಾಗತ

ಪಿಎಲ್‌ಐ ಯೋಜನೆಯನ್ನು ಉದ್ಯಮ ವಲಯ ಸ್ವಾಗತಿಸಿದೆ. ‘ಇದು ಸಕಾಲಿಕ, ಪರಿವರ್ತನೆ ತರುವಂಥದ್ದು. ಈ ಯೋಜನೆಯು ಸರಿಯಾದ ವಲಯಗಳನ್ನು ಗುರುತಿಸಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹೇಳಿದೆ.

ಯಾವ ವಲಯಕ್ಕೆ ಎಷ್ಟು ನೆರವು?

ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಉತ್ಪನ್ನಗಳು;₹ 5,000

ಆಟೊಮೊಬೈಲ್‌ ಮತ್ತು ವಾಹನ ಬಿಡಿಭಾಗಗಳು;₹ 57,042

ಔಷಧೋದ್ಯಮ;₹ 15,000

ದೂರಸಂಪರ್ಕ ಮತ್ತು ನೆಟ್‌ವರ್ಕ್‌ ಸಂಬಂಧಿತ ಉತ್ಪನ್ನಗಳು;₹ 12,195

ಜವಳಿ ಉತ್ಪನ್ನಗಳು;₹ 10,683

ಆಹಾರ ಉತ್ಪನ್ನಗಳು;₹ 10,900

ಹೆಚ್ಚಿನ ದಕ್ಷತೆಯ ಸೌರ ವಿದ್ಯುತ್ ಕೋಶಗಳು:₹ 4,500

ಮನೆಬಳಕೆಯ, ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳು;₹ 6,238

ವಿಶೇಷ ಬಗೆಯ ಉಕ್ಕಿನ ಉತ್ಪನ್ನಗಳು:₹ 6,322

ಸುಧಾರಿತ ಬ್ಯಾಟರಿ ಸೆಲ್;₹ 18,100

(ಮೊತ್ತವನ್ನು ಕೋಟಿಗಳಲ್ಲಿ ನೀಡಲಾಗಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.