ದುಬೈ: 2022ರ ಏಪ್ರಿಲ್ ನಂತರವೂ ತೈಲ ಉತ್ಪಾದನೆಯನ್ನು ಹೆಚ್ಚಿಸಬಾರದು ಎಂದು ಒಪೆಕ್ ಒಕ್ಕೂಟ ಹಾಗೂ ಒಕ್ಕೂಟದ ಮಿತ್ರರಾಷ್ಟ್ರಗಳು ಹೊಂದಿರುವ ಯೋಜನೆಗೆ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ವಿರೋಧ ವ್ಯಕ್ತಪಡಿಸಿದೆ.
ತೈಲ ಉತ್ಪಾದನೆಯನ್ನು 2022ನೆಯ ಇಸವಿಯುದ್ದಕ್ಕೂ ಹೆಚ್ಚಿಸದೆ ಇರುವ ಪ್ರಸ್ತಾವನೆಯು ತನ್ನ ಪಾಲಿಗೆ ಅನ್ಯಾಯದ್ದು ಎಂದು ಯುಎಇ ಇಂಧನ ಸಚಿವಾಲಯ ಹೇಳಿದೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯುಎಇ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಬಯಕೆ ಹೊಂದಿದೆ. ಆದರೆ, ಒಪೆಕ್‌ನ ಮುಖ್ಯ ಸದಸ್ಯನಾದ ಸೌದಿ ಅರೇಬಿಯಾ ತೈಲ ಉತ್ಪಾದನೆಯನ್ನು ನಿಯಂತ್ರಣದಲ್ಲಿ ಇರಿಸಬೇಕು ಎಂಬ ಇಚ್ಛೆ ಹೊಂದಿದೆ.
ಸೌದಿ ಅರೇಬಿಯಾ ನೇತೃತ್ವದ ಒಪೆಕ್ ಒಕ್ಕೂಟ ಹಾಗೂ ಒಕ್ಕೂಟದ ಮಿತ್ರರಾಷ್ಟ್ರಗಳು ತೈಲ ಪೂರೈಕೆ ಎಷ್ಟಿರಬೇಕು ಎಂಬ ವಿಚಾರದಲ್ಲಿ ಸಹಮತಕ್ಕೆ ಬರಲು ವಿಫಲವಾಗಿವೆ. ಈ ಬಗ್ಗೆ ಸೋಮವಾರ ಮತ್ತೆ ಮಾತುಕತೆ ನಡೆಯಲಿದೆ.
ಸಾಂಕ್ರಾಮಿಕದ ಕಾರಣದಿಂದಾಗಿ ಹಿಂದಿನ ವರ್ಷದಲ್ಲಿ ತೈಲ ಬಳಕೆಯು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ತೈಲ ಉತ್ಪಾದಕ ರಾಷ್ಟ್ರಗಳು ಉತ್ಪಾದನೆಯನ್ನು ತಗ್ಗಿಸಿದ ಕಾರಣದಿಂದಾಗಿ ತೈಲ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಕುಸಿಯದಂತೆ ಆಯಿತು. ಹಿಂದಿನ ವರ್ಷದ ಬೆಲೆ ಕುಸಿತದಿಂದಾಗಿ ತೈಲ ಉತ್ಪಾದಕ ರಾಷ್ಟ್ರಗಳ ಆದಾಯಕ್ಕೆ ಏಟು ಬಿದ್ದಿದೆ. ಈಗ ಉತ್ಪಾದನೆಯನ್ನು ಜಾಸ್ತಿ ಮಾಡುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದೆ.
ಆದರೆ, ತಕ್ಷಣಕ್ಕೆ ಉತ್ಪಾದನೆ ಜಾಸ್ತಿ ಮಾಡಿದರೆ ತೈಲ ಬೆಲೆಯಲ್ಲಿನ ಕಾಣುತ್ತಿರುವ ಸುಧಾರಣೆಗೆ ಧಕ್ಕೆ ಆಗಬಹುದು ಎಂಬ ಆತಂಕವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.