ನವದೆಹಲಿ: ಭಾರತದಾದ್ಯಂತ ಏಕೀಕೃತ ‘ಫುಡ್ ಪಾರ್ಕ್’ಗಳ ಅಭಿವೃದ್ಧಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸುಮಾರು ₹16 ಸಾವಿರ ಕೋಟಿ (2 ಬಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡಲಿದೆ.
ಭಾರತ, ಇಸ್ರೇಲ್ (ಐ2), ಅಮೆರಿಕ, ಯುಎಇ (ಯು2) ದೇಶಗಳನ್ನೊಳಗೊಂಡ ‘ಐ2ಯು2’ ವರ್ಚುವಲ್ ಸಮ್ಮೇಳನದಲ್ಲಿ ಗುರುವಾರ ಈ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಪ್ರಧಾನಿ ಯಾಯಿರ್ ಲಪಿದ್ ಹಾಗೂ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
‘ಆಹಾರ ಭದ್ರತಾ ಬಿಕ್ಕಟ್ಟು, ಶುದ್ಧ ಇಂಧನ, ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಸುದೀರ್ಘ ಅವಧಿವರೆಗೂ ಕಾಪಿಟ್ಟುಕೊಳ್ಳಲು ಇರುವ ನವೀನ ಮಾರ್ಗೋಪಾಯಗಳು ಹಾಗೂ ಆಹಾರ ಪೂರೈಕೆ ವ್ಯವಸ್ಥೆಯ ಕುರಿತು ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು’ ಎಂದು ಐ2ಯು2 ನಾಯಕರ ಜಂಟಿ ಪ್ರಕಟಣೆ ತಿಳಿಸಿದೆ.
‘ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಭಾರತ ಒದಗಿಸಲಿದೆ. ಅಮೆರಿಕ ಹಾಗೂ ಇಸ್ರೇಲ್‌ನ ಖಾಸಗಿ ಕಂಪನಿಗಳ ಪರಿಣತರು ಈ ಯೋಜನೆ ಸಾಕಾರಗೊಳಿಸುವ ದಿಸೆಯಲ್ಲಿ ಕೆಲಸ ಮಾಡಲಿದ್ದಾರೆ. ಬೆಳೆಯ ಇಳುವರಿ ಹೆಚ್ಚಿಸಲು, ಆ ಮೂಲಕ ದಕ್ಷಿಣ ಏಷ್ಯಾ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳು ಎದುರಿಸುತ್ತಿರುವ ಆಹಾರದ ಅಭದ್ರತೆ ನಿವಾರಿಸಲು ಈ ಯೋಜನೆ ಸಹಕಾರಿಯಾಗಲಿದೆ’ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
‘ಇಂಧನ ಭದ್ರತೆ, ಆಹಾರ ಭದ್ರತೆ ಹಾಗೂ ಆರ್ಥಿಕತೆಯ ಬೆಳವಣಿಗೆಗೆ ಐ2ಯು2 ಮಹತ್ವದ ಕಾಣಿಕೆ ನೀಡಲಿದೆ. ನಾವು ಜಂಟಿಯಾಗಿ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಅವುಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ರೂಪುರೇಷೆಯನ್ನೂ ಸಿದ್ಧಪಡಿಸಿದ್ದೇವೆ’ ಎಂದು ಮೋದಿ ಹೇಳಿದ್ದಾರೆ. ‘ಜಲ, ಇಂಧನ, ಸಾರಿಗೆ, ಅಂತರಿಕ್ಷ, ಆರೋಗ್ಯ ಮತ್ತು ಆಹಾರ ಭದ್ರತೆಯಂತಹ ಬಹುಮುಖ್ಯ ಕ್ಷೇತ್ರಗಳಲ್ಲಿ ಜಂಟಿ ಹೂಡಿಕೆ ಮಾಡುವ ಸಂಬಂಧ ಒಪ್ಪಂದವೊಂದನ್ನು ಮಾಡಿಕೊಂಡಿದ್ದೇವೆ’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.