ಬೆಂಗಳೂರು: ಬಾಡಿಗೆ ಟ್ಯಾಕ್ಸಿ ಸೇವೆ ಒದಗಿಸುವ ಉಬರ್ ಪ್ರಸಕ್ತ ವರ್ಷದಲ್ಲಿ ₹36 ಸಾವಿರ ಕೋಟಿ ವಹಿವಾಟು ನಡೆಸುವ ನಿರೀಕ್ಷೆ ಹೊಂದಿದೆ ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಭಜೀತ್ ಸಿಂಗ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬ್ರಿಟನ್ ಮೂಲದ ಪಬ್ಲಿಕ್ ಫಸ್ಟ್ ಸಂಸ್ಥೆ ಸಂಗ್ರಹಿಸಿದ ‘ಭಾರತದಲ್ಲಿ ಉಬರ್‌ನ ಆರ್ಥಿಕ ಪರಿಣಾಮಗಳು’ ಕುರಿತ ವರದಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
2013ರಲ್ಲಿ ಉಬರ್ ತನ್ನ ಸೇವೆಯನ್ನು ಭಾರತದಲ್ಲಿ ಆರಂಭಿಸಿತು. ಪ್ರಸ್ತುತ 125 ನಗರಗಳಲ್ಲಿ ಸೇವೆ ನೀಡುತ್ತಿದೆ. ಸ್ಥಳೀಯ ಸವಾರಿಯಿಂದ ಹಿಡಿದು ನಗರದೊಳಗಿನ (ಇಂಟರ್‌ಸಿಟಿ) ಪ್ರಯಾಣಗಳು ಮತ್ತು ಬಸ್ ಪ್ರಯಾಣದವರೆಗೆ ವೈವಿಧ್ಯಮಯ ಸೇವೆ ನೀಡುತ್ತಿದೆ. ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕಂಪನಿಯು ವಿಮೆ ಸವಲತ್ತನ್ನು ಒದಗಿಸುತ್ತಿದೆ ಎಂದು ಹೇಳಿದರು.
‘ಉಬರ್ ಮೋಟೊ’ ಮತ್ತು ‘ಉಬರ್ ಆಟೊ‘ದ ಈ ಎರಡು ಸೇವೆಗಳಿಂದ ಅಂದಾಜು ₹36 ಸಾವಿರ ಕೋಟಿ ಆರ್ಥಿಕ ಚಟುವಟಿಕೆ ನಡೆಸುವ ನಿರೀಕ್ಷೆ ಇದೆ. ಇದು ಮುಂದಿನ ವರ್ಷದಲ್ಲಿ ಶೇ 50ರಷ್ಟು ಬೆಳೆಯುವ ಅಂದಾಜಿದೆ. ಉಬರ್ ಬಸ್‌ಗಳನ್ನು ಬೆಂಗಳೂರಿನಲ್ಲಿ ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಸಮಯ ಉಳಿತಾಯವೇ ಉಬರ್ ಬಳಸಲು ಪ್ರಮುಖ ಕಾರಣವೆಂದು ಬೆಂಗಳೂರಿನ ಶೇ 93ರಷ್ಟು ಸವಾರರು ತಿಳಿಸಿದ್ದು, ಉಬರ್ ಬಳಸಲು ಸುರಕ್ಷತೆಯೇ ಪ್ರಮುಖ ಕಾರಣವೆಂದು ಶೇ 95ರಷ್ಟು ಮಹಿಳಾ ಸವಾರರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಕೆಂಗೇರಿ ಬಸ್ ನಿಲ್ದಾಣದಿಂದ 800 ಮೀಟರ್ ದೂರಕ್ಕೆ ಪ್ರಯಾಣಿಸಲು ಸಾಮಾನ್ಯ ದಿನದಲ್ಲಿ ₹45 ದರದ ಆಸುಪಾಸು ಇರುತ್ತದೆ. ಆದರೆ, ಕೆಲ ದಿನಗಳಿಂದ ದರದಲ್ಲಿ ಏರುಪೇರಾಗಿದ್ದು, ದರವು ₹110ರ ಆಸುಪಾಸು ತೋರಿಸುತ್ತಿದೆ. ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲೂ ದರ ದುಪ್ಪಟ್ಟು ತೆಗೆದುಕೊಳ್ಳಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಭಜೀತ್ ಸಿಂಗ್, ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಬ್ಲಿಕ್ ಫಸ್ಟ್ ಸಂಸ್ಥೆಯ ಜೊನಾಥನ್ ಡುಂಪಾಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.