ನವದೆಹಲಿ: ಭಾರತದಲ್ಲಿ ತೈಲ ಮಾರಾಟ ಕಂಪನಿಗಳು ನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸುತ್ತಿದ್ದರೆ, ಇದೇ ಸಮಯದಲ್ಲಿ ರಿಯಾಯಿತಿ ದರದಲ್ಲಿ ದೇಶಕ್ಕೆ ಕಚ್ಚಾ ತೈಲ ಪೂರೈಕೆ ಮಾಡಲು ರಷ್ಯಾ ಮುಂದಾಗಿದೆ. ಜಾಗತಿಕ ಘಟನೆಗಳು ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಪರಿಸ್ಥಿತಿಯನ್ನು ಸರ್ಕಾರ ಗಮನಿಸುತ್ತಿರುವುದಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲೀ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ದರದ ಏರಿಳಿತ ಶಮನಗೊಳಿಸಲು ಮತ್ತು ಕಚ್ಚಾ ತೈಲ ದರ ಏರಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯವಾದರೆ ಸರ್ಕಾರವು ತುರ್ತು ಬಳಕೆಯ ತೈಲ ಸಂಗ್ರಹವನ್ನು (ಎಸ್‌ಪಿಆರ್) ಬಿಡುಗಡೆ ಮಾಡಲಿದೆ ಎಂದಿದ್ದಾರೆ.
ಆಗಲೇ ಪೆಟ್ರೋಲ್ ದರ 6 ರೂಪಾಯಿ ಹೆಚ್ಚಳ
ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 14 ವರ್ಷಗಳ ಗರಿಷ್ಠ ಮಟ್ಟವಾದ 139 ಡಾಲರ್ ತಲುಪಿತ್ತು. ದೇಶದಲ್ಲಿ ಐದು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಕಾರಣಗಳಿಂದ ತೈಲ ಮಾರಾಟ ಕಂಪನಿಗಳು ದರ ಹೆಚ್ಚಳವನ್ನು ತಡೆಹಿಡಿದಿದ್ದವು. ಚುನಾವಣೆ ಫಲಿತಾಂಶ ಘೋಷಣೆಯಾಗಿ ಕೆಲ ದಿನಗಳಲ್ಲೇ ತೈಲ ದರ ಹೆಚ್ಚಳ ಶುರುವಾಗಿದೆ. ಮಾರ್ಚ್ 22ರಿಂದ ಈವರೆಗೂ ಒಂಭತ್ತು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳವಾಗಿದೆ. ಶುಕ್ರವಾರದವರೆಗೂ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ ₹6.4ರಷ್ಟು ಏರಿಕೆಯಾಗಿದೆ.
ರಷ್ಯಾದ ರಿಯಾಯಿತಿ...
ಭಾರತದಲ್ಲಿ ಬಳಕೆಯಾಗುತ್ತಿರುವ ತೈಲ ಪ್ರಮಾಣದಲ್ಲಿ ಶೇಕಡ 85ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಇರಾಕ್, ಸೌದಿ ಅರೇಬಿಯಾ, ಯುಎಇ, ನೈಜೀರಿಯಾ ಹಾಗೂ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ.
ಜಗತ್ತಿನಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಮತ್ತು ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಪಡೆಯುತ್ತಿದೆ. ಫೆಬ್ರುವರಿ 24ರಂದು ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾದಾಗಿನಿಂದ ಹಲವು ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದು, ತೈಲ ಖರೀದಿಯಿಂದ ಬಹಳಷ್ಟು ರಾಷ್ಟ್ರಗಳು ದೂರ ಉಳಿದಿವೆ. ಭಾರತವು ಫೆಬ್ರುವರಿ 24ರಿಂದ ಕನಿಷ್ಠ 130 ಲಕ್ಷ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಖರೀದಿಸಿದೆ. ರಾಯಿಟರ್ಸ್ ವರದಿಯ ಪ್ರಕಾರ, ಭಾರತ 2021ರಲ್ಲಿ ರಷ್ಯಾದಿಂದ ಖರೀದಿಸಿರುವ ಒಟ್ಟು ತೈಲ 160 ಲಕ್ಷ ಬ್ಯಾರೆಲ್‌ಗಳು.
ರಷ್ಯಾ ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 35 ಡಾಲರ್‌ಗಳಷ್ಟು ರಿಯಾಯಿತಿ ನೀಡುತ್ತಿರುವುದಾಗಿ ವರದಿಯಾಗಿದೆ.
ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಫ್ಯೂಚರ್ಸ್ ದರ ಪ್ರತಿ ಬ್ಯಾರೆಲ್‌ಗೆ 104.63 ಡಾಲರ್ ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲ ಫ್ಯೂಚರ್ಸ್ ದರ ಪ್ರತಿ ಬ್ಯಾರೆಲ್‌ಗೆ 99.89 ಡಾಲರ್‌ಗೆ ಕುಸಿದಿದೆ.
ರಷ್ಯಾದ ತೈಲ ಕಂಪನಿ ರಾಸ್‌ನೆಫ್ಟ್ ಜೊತೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಒಪ್ಪಂದವಿದ್ದು, ಆ ಮೂಲಕ ಭಾರತದ ಪ್ರಮುಖ ರಿಫೈನರಿಗಳು 2022ರಲ್ಲಿ ಗರಿಷ್ಠ 20 ಲಕ್ಷ ಟನ್‌ಗಳಷ್ಟು (ಸುಮಾರು 150 ಲಕ್ಷ ಬ್ಯಾರೆಲ್) ತೈಲ ಖರೀದಿಸಲು ಅವಕಾಶವಿದೆ.
ಭಾರತಕ್ಕೆ ಅಗತ್ಯವಿರುವ ಒಟ್ಟು ಕಚ್ಚಾ ತೈಲ ಪ್ರಮಾಣದಲ್ಲಿ 2021–22ರಲ್ಲಿ (ಜನವರಿವರೆಗೂ) ರಷ್ಯಾದಿಂದ ಶೇಕಡ 1ಕ್ಕಿಂತಲೂ ಕಡಿಮೆ ಪ್ರಮಾಣದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ–ತೈಲ ಬೆಲೆ: ಹಣದುಬ್ಬರ ಹೆಚ್ಚಳದ ಆತಂಕ
ಭಾರತದಲ್ಲಿರುವ ತೈಲ ಸಂಗ್ರಹ
ಹಣದುಬ್ಬರದಿಂದ ಉಂಟಾದ ಒತ್ತಡವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತವು 2021ರ ನವೆಂಬರ್‌ನಲ್ಲಿ ತುರ್ತು ಬಳಕೆ ತೈಲ ಸಂಗ್ರಹದಿಂದ 50 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಬಿಡುಗಡೆ ಬಿಡುಗಡೆ ಮಾಡಲು ಸಮ್ಮತಿಸಿತ್ತು.
ದೇಶದಲ್ಲಿ ತುರ್ತು ಬಳಕೆಗಾಗಿ ಸಂಗ್ರಹಿಸಿರುವ ಒಟ್ಟು ತೈಲ ಪ್ರಮಾಣವು 53.3 ಲಕ್ಷ ಟನ್‌ಗಳು ಅಥವಾ ಒಂಭತ್ತೂವರೆ ದಿನಗಳಿಗೆ ಅಗತ್ಯವಿರುವ ಕಚ್ಚಾ ತೈಲವನ್ನು ಪೂರೈಸುವಷ್ಟು ಸಂಗ್ರಹವಿದೆ. ಇದರೊಂದಿಗೆ ತೈಲ ಮಾರಾಟ ಕಂಪನಿಗಳು ಒಟ್ಟಾರೆ 64.5 ದಿನಗಳಿಗೆ ಆಗುವಷ್ಟು ತೈಲ ಸಂಗ್ರಹ ಹೊಂದಿವೆ.
ಈ ಎಲ್ಲ ಮೂಲಗಳಲ್ಲಿ ಒಟ್ಟು 74 ದಿನಗಳ ವರೆಗೂ ಬಳಸುವಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲ್ ಉತ್ಪನ್ನಗಳ ಸಂಗ್ರಹವಿರುವುದಾಗಿ ಸಚಿವ ರಾಮೇಶ್ವರ್ ತೇಲೀ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.