ಕೇಂದ್ರ ಸರ್ಕಾರವು ತನ್ನ ತೆರಿಗೆ ವರಮಾನವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹಾಗಾಗಿ, ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಿರುವ ತೆರಿಗೆ ಪಾಲಿನಲ್ಲಿ ಭಾರಿ ಕಡಿತವಾಗಿದೆ. 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ನೂತನ ನಿಯಮಾವಳಿಗಳ ಪ್ರಕಾರವೇ 2020–21ನೇ ಸಾಲಿನಲ್ಲಿ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ. ಇದರಿಂದ, ಕೇಂದ್ರದ ತೆರಿಗೆ ಆದಾಯದಲ್ಲಿ ಬರಬೇಕಿದ್ದ ಪಾಲಿನಲ್ಲಿ ಕರ್ನಾಟಕಕ್ಕೆ ₹ 5,102 ಕೋಟಿ ಕಡಿತ ಆಗಬಹುದು.
* ಕೇಂದ್ರ ತೆರಿಗೆ ಮತ್ತು ಸುಂಕದ ವರಮಾನದಲ್ಲಿ ರಾಜ್ಯಗಳ ಪಾಲನ್ನು ಹಂಚಿಕೆ ಮಾಡುವ ನಿಯಮಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಈ ಪ್ರಕಾರ, ರಕ್ಷಣೆ ಮತ್ತು ಆಂತರಿಕ ಭದ್ರತೆಗೆ ಪ್ರತ್ಯೇಕ ಅನುದಾನವನ್ನು ತೆಗೆದಿರಿಸಲು ಅವಕಾಶವಿದೆ. ರಾಜ್ಯಗಳ ಆಂತರಿಕ ಭದ್ರತೆಗೆ ತೆಗೆದಿರಿಸುವ ಅನುದಾನ ಕಡಿತವಾಗಲಿದೆ. ಕೇಂದ್ರ ಸರ್ಕಾರದ ಬಳಿ ಹೆಚ್ಚಿನ ಹಣ ಉಳಿಯಲಿದೆ. ಈ ಹಣವನ್ನು ವೆಚ್ಚ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರಲಿದೆ. ರಾಜ್ಯ ಸರ್ಕಾರಗಳು ಕೇಂದ್ರದ ತೆರಿಗೆ ಪಾಲಿನಲ್ಲಿ ಕಡಿತ ಎದುರಿಸಬೇಕಾಗುತ್ತದೆ.
* ಹೊಸ ನಿಯಮಗಳ ಪ್ರಕಾರ, ಕೆಲವಾರು ಅನುದಾನ ವನ್ನು ರಾಜ್ಯವಾರು ವಿಂಗಡಣೆ ಮಾಡದೇ ಇರಲು ಅವಕಾಶವಿದೆ. ಈ ಹಣವೂ ಕೇಂದ್ರ ಸರ್ಕಾರದ ಬಳಿ ಉಳಿಯಲಿದೆ. ಈ ಅನುದಾನವನ್ನು ವಲಯ ವಾರು ಹಂಚಿಕೆ ಮಾಡಲು ಕೇಂದ್ರಕ್ಕೆ ಅಧಿಕಾರವಿದೆ. ಈ ಭಾರಿ ಬಜೆಟ್‌ನಲ್ಲಿ ಇದನ್ನು ಅನುಸರಿಸಲಾಗಿದೆ. ಹೀಗಾಗಿ ಕರ್ನಾಟಕಕ್ಕೆ ಈ ಬಜೆಟ್‌ನಲ್ಲಿ, ಹಿಂದಿನ ಬಜೆಟ್‌ಗಿಂತಲೂ ಕಡಿಮೆ ಅನುದಾನ ದೊರೆತಿದೆ.
ಕರ್ನಾಟಕಕ್ಕೆ ಕತ್ತರಿ, ಉತ್ತರದ ರಾಜ್ಯಗಳಿಗೆ ಏರಿಕೆ
ಕೇಂದ್ರ ಸರ್ಕಾರದ ತೆರಿಗೆ ವರಮಾನದಲ್ಲಿ ಕರ್ನಾಟಕದ ಪಾಲನ್ನು ಕಡಿಮೆ ಮಾಡಲಾಗಿದೆ. ಆದರೆ, ಉತ್ತರ ಪ್ರದೇಶ ಮತ್ತು ಬಿಹಾರದ ಪಾಲನ್ನು ಏರಿಕೆ ಮಾಡಲಾಗಿದೆ.
ಆಧಾರ: 15ನೇ ಹಣಕಾಸು ಆಯೋಗದ ವರದಿ , 2020–2021ನೇ ಸಾಲಿನ ಬಜೆಟ್, 2019– 2020ನೇ ಸಾಲಿನ ಬಜೆಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.