ನವದೆಹಲಿ: ಯುಪಿಐ ಮೂಲಕ ನಡೆಯುವ ವಹಿವಾಟು ಏರಿಕೆ ಕಾಣುತ್ತಿದ್ದು, 2026–27ರ ವೇಳೆಗೆ ದೇಶದಲ್ಲಿ ಯುಪಿಐ ವಹಿವಾಟು ಸಂಖ್ಯೆಯು ಪ್ರತಿ ದಿನಕ್ಕೆ 100 ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
ದೇಶದಲ್ಲಿ ನಡೆಯುವ ಡಿಜಿಟಲ್ ವಹಿವಾಟುಗಳಲ್ಲಿ ಯುಪಿಐ ಮೂಲಕ ನಡೆಯುವ ವಹಿವಾಟಿನ ಪಾಲು ಶೇ 90ರಷ್ಟು ಇರಲಿದೆ ಎಂದು ಪಿಡಬ್ಲ್ಯುಸಿ ಇಂಡಿಯಾ ವರದಿ ಹೇಳಿದೆ.
2022–23ರ ಹಣಕಾಸು ವರ್ಷದಲ್ಲಿ ಯುಪಿಐ ಮೂಲಕ 8,371 ಕೋಟಿಯಷ್ಟು ವಹಿವಾಟುಗಳು ನಡೆದಿದ್ದು, ಇದು 2026–27ರ ಹಣಕಾಸು ವರ್ಷದ ವೇಳೆಗೆ 37,900 ಕೋಟಿಗೆ ಏರಿಕೆ ಆಗಲಿದೆ ಎಂದು ಹೇಳಿದೆ.
2022–23ರಲ್ಲಿ ನಡೆದಿರುವ ರಿಟೇಲ್ ವಹಿವಾಟಿನ ಒಟ್ಟು ಪ್ರಮಾಣದಲ್ಲಿ ಶೇ 75ರಷ್ಟು ಯುಪಿಐ ಮೂಲಕವೇ ಆಗಿದೆ ಎಂದು ಪಿಡಬ್ಲ್ಯುಸಿ ವರದಿ ‘ದಿ ಇಂಡಿಯನ್ ಪೇಮೆಂಟ್ಸ್ ಹ್ಯಾಂಡ್‌ಬುಕ್–2022–27’ರಲ್ಲಿ ಹೇಳಲಾಗಿದೆ.
ಭಾರತದ ಡಿಜಿಟಲ್ ಪಾವತಿ ಮಾರುಕಟ್ಟೆಯ ವಾರ್ಷಿಕ ಸಂಯುಕ್ತ ಬೆಳವಣಿಗೆ ಪ್ರಮಾಣವು (ಸಿಎಜಿಆರ್) ಶೇ 50ರಷ್ಟು ಇದ್ದು, 2026–27ರ ವೇಳೆಗೆ ವಹಿವಾಟುಗಳ ಸಂಖ್ಯೆಯು 41,100 ಕೋಟಿಗೆ ತಲುಪುವ ನಿರೀಕ್ಷೆ ಇದೆ.
ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ನಡೆಸುವುದು ಉತ್ತಮ ಬೆಳವಣಿಗೆ ಕಾಣುತ್ತಿದೆ. 2024–25ರ ವೇಳೆಗೆ ಕ್ರೆಡಿಟ್ ಕಾರ್ಡ್ ಬಳಕೆ ಪ್ರಮಾಣವು ಡೆಬಿಟ್ ಕಾರ್ಡ್ ಬಳಕೆಯನ್ನೂ ಮೀರುವ ಅಂದಾಜು ಮಾಡಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ವಿತರಣೆಯ ವಾರ್ಷಿಕ ಸರಾಸರಿ ಬೆಳವಣಿಗೆ ಪ್ರಮಾಣವು ಶೇ 21ರಷ್ಟು ಆಗಲಿದ್ದು, ಡೆಬಿಟ್ ಕಾರ್ಡ್ ವಿತರಣೆಯು ಶೇ 3ರಷ್ಟು ಇರಲಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.