ನವದೆಹಲಿ : ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೆಚರ್ ಬ್ಯಾಂಕ್‌ಗಳು ದಿವಾಳಿ ಆಗಿರುವುರಿಂದ ಭಾರತದ ಬ್ಯಾಂಕಿಂಗ್ ವಲಯದ ಮ್ಯೂಚುವಲ್ ಫಂಡ್‌ಗಳು ಕಳೆದ ವಾರದ ವಹಿವಾಟಿನಲ್ಲಿ ಶೇ 6ರವರೆಗೆ ನಷ್ಟ ಕಾಣುವಂತಾಯಿತು.
ಅಮೆರಿಕದ ಈ ಎರಡು ಬ್ಯಾಂಕ್‌ಗಳ ವೈಫಲ್ಯವು ಜಾಗತಿಕ ಹಣಕಾಸು ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಭಾರತದಲ್ಲಿಯೂ ಬ್ಯಾಂಕಿಂಗ್ ವಲಯದ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿತು. ಕಳೆದ ವಾರದ ವಹಿವಾಟಿನಲ್ಲಿ ಷೇರುಗಳು ಶೇ 3 ರಿಂದ ಶೇ 13ರವರೆಗೆ ಇಳಿಕೆ ಕಂಡವು.
ಹೀಗಿದ್ದರೂ, ಭಾರತದ ಬ್ಯಾಂಕ್‌ಗಳ ಮೇಲೆ ಅಮೆರಿಕದ ಈ ಬ್ಯಾಂಕ್‌ಗಳ ನೇರ ಪರಿಣಾಮವು ಅಲ್ಪಮಟ್ಟದಾಗಿರಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಹೂಡಿಕೆದಾರರು ಬ್ಯಾಂಕಿಂಗ್ ಷೇರುಗಳನ್ನು ನಿರಂತರವಾಗಿ ಮಾರಾಟ ಮಾಡಿರುವುದರಿಂದ ಬ್ಯಾಂಕಿಂಗ್ ವಲಯದ ಮ್ಯಚುವಲ್ ಫಂಡ್‌ಗಳು ನಷ್ಟಕ್ಕೆ ಒಳಗಾದವು.
ಏಸ್ ಎಂಎಫ್ ನೆಕ್ಸ್ಟ್‌ನ ಮಾಹಿತಿಯ ಪ್ರಕಾರ, ಬ್ಯಾಂಕಿಂಗ್ ವಲಯದ 16 ಮ್ಯೂಚುವಲ್ ಫಂಡ್‌ಗಳು ಮಾರ್ಚ್ 17ಕ್ಕೆ ಕೊನೆಗೊಂಡ ವಾರದಲ್ಲಿ ಹೂಡಿಕೆದಾರರಿಗೆ ಶೇ 1.6 ರಿಂದ ಶೇ 6ರ ಅಸುಪಾಸಿನಲ್ಲಿ ನಕಾರಾತ್ಮಕ ಗಳಿಕೆ ತಂದುಕೊಟ್ಟಿವೆ.
ಈ ವರ್ಷದಲ್ಲಿ ಈವರೆಗೆ ಈ ಫಂಡ್‌ಗಳು ಶೇ 8 ರಿಂದ ಶೇ 10ರವರೆಗೆ ನಕಾರಾತ್ಮಕ ಗಳಿಕೆ ಕಂಡಿವೆ.
ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವೀಸಸ್ ಫಂಡ್, ಟಾಟಾ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸಸ್ ಫಂಡ್, ಎಚ್‌ಡಿಎಫ್‌ಸಿ, ಎಲ್‌ಐಸಿ ಎಂಎಫ್ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಶಿಯಲ್ ಫಂಡ್ ಮತ್ತು ನಿಪ್ಪಾನ್ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಶಿಯಲ್ ಫಂಡ್‌ಗಳು ಕಳೆದ ವಾರದ ವಹಿವಾಟಿನಲ್ಲಿ ಶೇ 5ಕ್ಕೂ ಹೆಚ್ಚಿನ ನಷ್ಟ ಕಂಡಿವೆ. ಆದರೆ, ಒಂಬತ್ತು ತಿಂಗಳು ಮತ್ತು 1 ವರ್ಷದ ಅವಧಿಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ನಿಧಿಗಳು ಕ್ರಮವಾಗಿ ಶೇ 20 ಮತ್ತು ಶೇ 12ರಷ್ಟು ಗಳಿಕೆ ತಂದುಕೊಟ್ಟಿವೆ.
ಷೇರುಪೇಟೆಯಲ್ಲಿನ ಅನಿಶ್ಚಿತ ಪರಿಸ್ಥಿತಿ ಮತ್ತು ಬಡ್ಡಿದರ ನಿರಂತರವಾಗಿ ಹೆಚ್ಚಾಗುತ್ತಿರುವುದು ಮ್ಯೂಚುವಲ್ ಫಂಡ್‌ಗಳಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಫೈಯರ್ಸ್‌ನ ಸಂಶೋಧನಾ ಮುಖ್ಯಸ್ಥ ಗೋಪಾಲ್ ಕಾವಲಿರೆಡ್ಡಿ ತಿಳಿಸಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) 2021ರ ಅಕ್ಟೋಬರ್‌ನಿಂದಲೂ ಹಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸೇವೆಗಳ ವಲಯಗಳಿಂದ ಬಂಡವಾಳ ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.