ವಾಷಿಂಗ್ಟನ್:ಅಮೆರಿಕದ ಹಣದುಬ್ಬರ ದರವು ನಾಲ್ಕು ದಶಕಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವ ಕಾರಣ, ಅಲ್ಲಿನ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಸಾಲದ ಮೇಲಿನ ಬಡ್ಡಿ ದರವನ್ನು ಬುಧವಾರ ಶೇಕಡ 0.75ರಷ್ಟು ಹೆಚ್ಚಳ ಮಾಡಿದೆ. ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಬಡ್ಡಿದರ ಹೆಚ್ಚಳ ಮಾಡಲಾಗಿದೆ.
ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಬಡ್ಡಿದರ ಏರಿಕೆಯು ಅಗತ್ಯ ಕ್ರಮವಾಗಿದೆ ಎಂದು ಫೆಡರಲ್ ರಿಸರ್ವ್‌ನ ಮುಖ್ಯಸ್ಥ ಜೆರೋಮ್ ಪೋವೆಲ್ ಹೇಳಿದ್ದಾರೆ.
ಈ ವರ್ಷದ ಆರಂಭದಿಂದ ಕೇಂದ್ರೀಯ ಬ್ಯಾಂಕ್‌ನ ಸಮಿತಿಯು ಬಡ್ಡಿದರವನ್ನು ಶೂನ್ಯದಿಂದ ಶೇಕಡ 1.5–1.75ರಷ್ಟು ಹೆಚ್ಚಿಸಿದೆ. 1994ರ ನವೆಂಬರ್‌ನಿಂದ ಇದೇ ಮೊದಲ ಬಾರಿಗೆ ಒಂದೇ ಸಲಕ್ಕೆ ಬಡ್ಡಿದರವನ್ನು 75 ಬೇಸಿಸ್ ಪಾಯಿಂಟ್ ಹೆಚ್ಚಿಸಲಾಗಿದೆ.
ಫೆಡರಲ್ ರಿಸರ್ವ್‌ನ ನಿರ್ಧಾರ ಹೊರಬೀಳುತ್ತಿದ್ದಂತೆ ಅಮೆರಿಕ, ಆಸ್ಟ್ರೇಲಿಯಾ, ಟೋಕಿಯೊ ಸೇರಿದಂತೆ ಹಲವು ಷೇರುಪೇಟೆಗಳಲ್ಲಿ ಚೇತರಿಕೆ ಕಂಡು ಬಂದಿದೆ. ಡಾಲರ್ ಮೌಲ್ಯದಲ್ಲೂ ಏರಿಕೆಯಾಗಿದೆ. ಅಮೆರಿಕದ ಎಸ್‌ಆ್ಯಂಡ್‌ಪಿ 500 ಸೂಚ್ಯಂಕ ಶೇಕಡ 1.5ರಷ್ಟು ಹೆಚ್ಚಳ ದಾಖಲಿಸಿದೆ.
ಇತ್ತೀಚಿನ ವರೆಗೂ ಫೆಡರಲ್ ರಿಸರ್ವ್ ಶೇಕಡ 0.5ರಷ್ಟು ಬಡ್ಡಿದರ ಏರಿಕೆಗೆ ನಿರ್ಧರಿಸಿರುವುದಾಗಿ ವರದಿಯಾಗಿತ್ತು. ಆದರೆ, ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮದ ಬಗ್ಗೆ ಆರ್ಥಿಕ ತಜ್ಞರು ಸೂಚಿಸಿದ್ದರು. ಪ್ರಸಕ್ತ ಸಾಲಿನ ಬಡ್ಡಿದರವು ಶೇಕಡ 3.4ರವರೆಗೂ ತಲುಪುವುದಾಗಿ ಅಂದಾಜಿಸಲಾಗಿದೆ. ಮಾರ್ಚ್‌ನಲ್ಲಿ ಈ ವರ್ಷಾಂತ್ಯಕ್ಕೆ ಬಡ್ಡಿದರ ಶೇಕಡ 1.9ರವರೆಗೂ ತಲುಪುವುದಾಗಿ ಅಂದಾಜಿಸಲಾಗಿತ್ತು.
ಅಮೆರಿಕದಲ್ಲಿ ಗ್ಯಾಸೊಲಿನ್, ಆಹಾರ, ವಾಹನಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ತೀವ್ರ ಏರಿಕೆಯಾಗಿದೆ. ಮೇ ತಿಂಗಳ ಕೊನೆಗೆ ಹಣದುಬ್ಬರವು ಶೇಕಡ 8.60ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.