ADVERTISEMENT

ತೈಲ ಉತ್ಪಾದನೆ ಕಡಿತಕ್ಕೆ ಸಮ್ಮತಿ

ಒಪೆಕ್‌ ಸದಸ್ಯ ದೇಶಗಳು, ರಷ್ಯಾ ನಡುವಣ ಮಾತುಕತೆ ಫಲಪ್ರದ

ಏಜೆನ್ಸೀಸ್
Published 9 ಏಪ್ರಿಲ್ 2020, 20:15 IST
Last Updated 9 ಏಪ್ರಿಲ್ 2020, 20:15 IST
   

ಸಿಂಗಪುರ: ಕಚ್ಚಾ ತೈಲ ಉತ್ಪಾದನೆಗೆ ಸಂಬಂಧಿಸಿದ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಪ್ರತಿ ದಿನ 1 ಕೋಟಿ ಬ್ಯಾರಲ್‌ನಷ್ಟು ಉತ್ಪಾದನೆ ಕಡಿತ ಮಾಡಲು ಸಮ್ಮತಿಸಲಾಗಿದೆ.

ತೈಲ ರಫ್ತು ದೇಶಗಳ ಸಂಘಟನೆಯು (ಒಪೆಕ್‌) ಮತ್ತು ಅದರ ಮಿತ್ರ ದೇಶಗಳು ಮೇ, ಜೂನ್‌ ತಿಂಗಳಲ್ಲಿ ಉತ್ಪಾದನೆ ಕಡಿತಕ್ಕೆ ತಾತ್ವಿಕವಾಗಿ ಸಮ್ಮತಿಸಿವೆ. ಸೌದಿ ಅರೇಬಿಯಾ ಮತ್ತು ರಷ್ಯಾ ತಮ್ಮ ಉತ್ಪಾದನೆಯಲ್ಲಿ ಶೇ 23ರಷ್ಟು ಕಡಿತ ಮಾಡಲಿವೆ.

ಉತ್ಪಾದನೆ ಕಡಿತಗೊಳಿಸಲು ತಾನು ಸಿದ್ಧವಿರುವುದಾಗಿ ರಷ್ಯಾ ಈ ಮೊದಲೇ ಸುಳಿವು ನೀಡಿತ್ತು. ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಉತ್ಪಾದನೆ ಕಡಿತಗೊಳಿಸುವ ಸಂಬಂಧ ಒಪ್ಪಂದಕ್ಕೆ ಬರುವ ಕುರಿತು ಗುರುವಾರ ವಿಡಿಯೊ ಕಾನ್‌ಫೆರನ್ಸ್‌ ಸಭೆ ನಿಗದಿಯಾಗಿತ್ತು.

ADVERTISEMENT

ಕೊರೊನಾ ವೈರಸ್‌ ಬಾಧಿತ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಬೇಡಿಕೆ ಕುಸಿತ ಮತ್ತು ಪೂರೈಕೆ ಹೆಚ್ಚಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ರಷ್ಯಾ ಸಭೆ ನಡೆಸಲು ವಾರದ ಹಿಂದೆ ಒಮ್ಮತಕ್ಕೆ ಬಂದಿದ್ದವು.

ಪ್ರತಿ ದಿನ 16 ಲಕ್ಷ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತ ಮಾಡಲು ಸಿದ್ಧ ಇರುವುದಾಗಿ ರಷ್ಯಾ ಬುಧವಾರ ಪ್ರಕಟಿಸಿತ್ತು. ಈ ಪ್ರಕಟಣೆಯ ಬೆನ್ನಲ್ಲೇ ಡಾಲರ್‌ ಎದುರಿನ ರಷ್ಯಾದ ಕರೆನ್ಸಿ ರೂಬಲ್‌ ಬೆಲೆ ಏರಿಕೆಯಾಗಿತ್ತು.

‘ಪ್ರತಿ ದಿನ 1 ಕೋಟಿಯಿಂದ 1.5 ಕೋಟಿ ಬ್ಯಾರೆಲ್‌ನಷ್ಟು ಉತ್ಪಾದನೆ ಕಡಿತಗೊಳಿಸಲು ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ’ ಎಂದು ಕುವೈತ್‌ನ ಇಂಧನ ಸಚಿವ ಖಲೇದ್‌ ಅಲ್‌ ಫಧೇಲ್‌ ಹೇಳಿದ್ದರು.

ಟೆಲಿ ಕಾನ್‌ಫೆರನ್ಸ್‌ನಲ್ಲಿ ಪ್ರತಿ ದಿನ 1.20 ಕೋಟಿ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತಗೊಳಿಸುವ ಸಂಬಂಧ ಚರ್ಚೆ ನಡೆದಿತ್ತು. ಅಂತಿಮವಾಗಿ ಪ್ರತಿ ದಿನ 1 ಕೋಟಿ ಬ್ಯಾರಲ್‌ನಷ್ಟು ಉತ್ಪಾದನೆ ಕಡಿತ ಮಾಡಲು ಒಪೆಕ್‌ ಸಂಘಟನೆ ಸಮ್ಮತಿಸಿದೆ. ಇತರ ದೇಶಗಳು 50 ಲಕ್ಷ ಬ್ಯಾರಲ್‌ ಕಡಿತ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಮಾತುಕತೆ ಯಶಸ್ವಿಯಾಗುವ ಬಗ್ಗೆ ಪೂರ್ವಭಾವಿ ಸೂಚನೆಗಳು ಸಿಕ್ಕಿದ್ದರಿಂದ ತೈಲ ಬೆಲೆಯು ಏರಿಕೆ ದಾಖಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.