ನವದೆಹಲಿ: ವಿದೇಶಿ ಪ್ರಜೆಗಳಿಗೆ ನೇರವಾಗಿ ಸಮನ್ಸ್ ಜಾರಿಗೊಳಿಸುವ ನ್ಯಾಯಿಕ ಅಧಿಕಾರವು ಅಮೆರಿಕದ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಮಿಷನ್‌ಗೆ (ಎಸ್‌ಇಸಿ) ಇಲ್ಲ ಎಂದು ಮೂಲಗಳು ಹೇಳಿವೆ.
ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಅಣ್ಣನ ಮಗ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ಕೋರ್ಟ್‌ನಲ್ಲಿ ಲಂಚ ಪ್ರಕರಣ ಕುರಿತು ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆಗಳ ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ.
ಪ್ರಕರಣ ಕುರಿತಂತೆ ಅಮೆರಿಕದ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಮಿಷನ್‌ನಿಂದ (ಎಸ್‌ಇಸಿ) ಈ ಇಬ್ಬರಿಗೂ ನ್ಯಾಯಾಲಯದ ಮುಂದೆ ವಿವರಣೆ ನೀಡುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಹೇಳಲಾಗಿತ್ತು.
ಆದರೆ, ಎಸ್ಇಸಿಯಿಂದ ಸಮನ್ಸ್ ಜಾರಿಗೊಳಿಸುವುದಕ್ಕೂ ಮೊದಲು ರಾಜತಾಂತ್ರಿಕ ಶಿಷ್ಟಾಚಾರ ಪಾಲಿಸುವುದು ಕಡ್ಡಾಯವಾಗಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಸಮನ್ಸ್ ರವಾನಿಸಬೇಕಿದೆ. ಜೊತೆಗೆ, ಇದಕ್ಕೆ ಸಂಬಂಧಿಸಿದಂತೆ ರೂಪಿಸಿರುವ ಉಭಯ ದೇಶಗಳ ರಾಯಭಾರ ನೀತಿಯನ್ನು ಪಾಲಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.
1965ರ ಹೇಗ್ ಸಮಾವೇಶ, ಅಮೆರಿಕದ ಆಡಳಿತ ಮತ್ತು ಭಾರತದ ನಡುವೆ ಪರಸ್ಪರ ಕಾನೂನು ನೆರವು ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದಡಿ ರೂಪಿಸಿರುವ ರೀತಿ-ರಿವಾಜು ಪಾಲಿಸಬೇಕಿದೆ. ಇದರ ಅನ್ವಯವೇ ವಿದೇಶಿ ಪ್ರಜೆಗಳಿಗೆ ಸಮನ್ಸ್ ಜಾರಿಗೊಳಿಸಬೇಕಿದೆ. ಅಂಚೆ ಮೂಲಕ ಸಂಬಂಧಪಟ್ಟವರಿಗೆ ನೇರವಾಗಿ ಕಳುಹಿಸುವ ಅಧಿಕಾರ ಇರುವುದಿಲ್ಲ ಎಂದು ಹೇಳಿವೆ.
ಸಮನ್ಸ್‌ಗಳು ನ್ಯೂಯಾರ್ಕ್ ನ್ಯಾಯಾಲಯದ ಮುಂದೆ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಮಿಷನ್‌ನಿಂದ ಸಲ್ಲಿಸಿದ ಕಾನೂನು ದಾಖಲೆಯ ಭಾಗವಾಗಿವೆ. ಹಾಗಾಗಿ, ಗೌತಮ್ ಅದಾನಿ ಹಾಗೂ ಇತರರಿಗೆ ಇವುಗಳನ್ನು ರವಾನಿಸಲು ಕೆಲ ಸಮಯ ಹಿಡಿಯಲಿದೆ ಎಂದು ಹೇಳಿವೆ.
ಆದರೆ, ಇಲ್ಲಿಯವರೆಗೂ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ಯಾವುದೇ ಸಮನ್ಸ್ ಜಾರಿಯಾಗಿಲ್ಲ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.