ADVERTISEMENT

ಲಂಚ ಪ್ರಕರಣ | ಅದಾನಿಗೆ ಸಮನ್ಸ್‌ ಜಾರಿ: ಅಭಿಪ್ರಾಯ ಮಂಡನೆಗೆ 21 ದಿನದ ಗಡುವು

ಪಿಟಿಐ
Published 23 ನವೆಂಬರ್ 2024, 15:27 IST
Last Updated 23 ನವೆಂಬರ್ 2024, 15:27 IST
ಗೌ‌ತಮ್‌ ಅದಾನಿ –ಪಿಟಿಐ ಚಿತ್ರ
ಗೌ‌ತಮ್‌ ಅದಾನಿ –ಪಿಟಿಐ ಚಿತ್ರ   

ನವದೆಹಲಿ: ಅಮೆರಿಕದ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಲಂಚ ಪ್ರಕರಣ ಕುರಿತ ಆರೋಪ ಪಟ್ಟಿ ಸಂಬಂಧ ನ್ಯಾಯಾಧೀಶರ ಮುಂದೆ ವಿವರಣೆ ನೀಡುವಂತೆ ಉದ್ಯಮಿ ಗೌತಮ್‌ ಅದಾನಿ ಮತ್ತು ಅವರ ಅಣ್ಣನ ಮಗ ಸಾಗರ್‌ ಅದಾನಿ ಅವರಿಗೆ ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್‌ ಕಮಿಷನ್‌ನಿಂದ (ಎಸ್‌ಇಸಿ) ಸಮನ್ಸ್‌ ಜಾರಿಗೊಳಿಸಲಾಗಿದೆ.

ಭಾರತದಲ್ಲಿ ಸೌರ ವಿದ್ಯುತ್‌ ಉತ್ಪಾದಿಸುವ ಯೋಜನೆಗಳ ಗುತ್ತಿಗೆ ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಈ ಆರೋಪ ‍ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದ ವಿಚಾರಣೆಯ ಪೂರ್ವಭಾವಿಯಾಗಿ ಸಮನ್ಸ್‌ ನೀಡಲಾಗಿದೆ.

ಅಹಮದಾಬಾದ್‌ನಲ್ಲಿ ಅದಾನಿಗೆ ಸೇರಿದ ಶಾಂತಿವನ್ ಫಾರ್ಮ್ ಹಾಗೂ ಸಾಗರ್‌ ಅವರಿಗೆ ಸೇರಿದ ಬೋಡಕ್‌ದೇವ್ ನಿವಾಸದ ವಿಳಾಸಕ್ಕೆ, ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯದ ಮೂಲಕ ಸಮನ್ಸ್ ರವಾನಿಸಲಾಗಿದೆ.

ADVERTISEMENT

ನಾಗರಿಕ ಕಾರ್ಯವಿಧಾನ ಕುರಿತ ಫೆಡರಲ್ ನಿಯಮ 12ರ ಅಡಿ ಈ ಸಮನ್ಸ್‌ ನೀಡಲಾಗಿದೆ. ಇದು ಜಾರಿಗೊಂಡ ದಿನಾಂಕದಿಂದ 21 ದಿನಗೊಳಗೆ ಅಭಿಪ್ರಾಯ ನೀಡಬೇಕು (ನೋಟಿಸ್‌ ಸ್ವೀಕರಿಸಿದ ದಿನದಿಂದ ಎಂಬುದಾಗಿ ಪರಿಗಣಿಸುವಂತಿಲ್ಲ) ಎಂದು ಗಡುವು ನೀಡಲಾಗಿದೆ. 

‘ನಿಗದಿತ ಅವಧಿಯೊಳಗೆ ನ್ಯಾಯಾಲಯ ಮುಂದೆ ನಿಮ್ಮ ಉತ್ತರ ನೀಡಬೇಕು. ಇಲ್ಲವಾದರೆ ದೂರಿನಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಪೂರ್ವನಿಯೋಜಿತವಾಗಿ ತೀರ್ಪು ಪ್ರಕಟಿಸಲಾಗುವುದು’ ಎಂದು ಹೇಳಲಾಗಿದೆ.

ಗೌತಮ್‌ ಅದಾನಿ ಮತ್ತು ಸಾಗರ್‌ ಅದಾನಿ ಅವರು, ಸುಲಭವಾಗಿ ಸೌರ ವಿದ್ಯುತ್‌ ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ. 2020ರಿಂದ 2024ರ ಅವಧಿಯಲ್ಲಿ ಲಂಚ ನೀಡಲಾಗಿದೆ. ಮುಂದಿನ ಎರಡು ದಶಕದ ಅವಧಿಯಲ್ಲಿ ₹16,800 ಕೋಟಿ ಲಾಭ ಗಳಿಸುವ ಉದ್ದೇಶ ಇದರ ಹಿಂದಿದೆ ಎಂದು ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.