ಬೆಂಗಳೂರು:ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ತಗ್ಗಿಸುವ ಯೋಜನೆಯ ಭಾಗವಾಗಿ 1.8 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನುಡಿಸೆಂಬರ್ 17ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಅಮೆರಿಕದ ಇಂಧನ ಇಲಾಖೆಯು ಹೇಳಿದೆ.
5 ಕೋಟಿ ಬ್ಯಾರಲ್ ಕಚ್ಚಾತೈಲವನ್ನು ತನ್ನ ಸಂಗ್ರಹಾಗಾರಗಳಿಂದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಅಮೆರಿಕವು ನವೆಂಬರ್‌ನಲ್ಲಿ ಘೋಷಿಸಿತ್ತು. ಮೊದಲ ಹಂತದಲ್ಲಿ 1.8 ಕೋಟಿ ಬ್ಯಾರಲ್ ಕಚ್ಚಾ ತೈಲ ಬಿಡುಗಡೆ ಮಾಡಲಿದ್ದು, ಮುಂಬರುವ ತಿಂಗಳುಗಳಲ್ಲಿ ಇನ್ನುಳಿದ ಪ್ರಮಾಣವನ್ನೂ ಬಿಡುಗಡೆ ಮಾಡಲಾಗುವುದು ಎಂದು ಅದು ತಿಳಿಸಿದೆ.
ಅಮೆರಿಕದ ಮನವಿಯಂತೆ, ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಸಹ ತಮ್ಮ ತೈಲ ಸಂಗ್ರಹಾಗಾರಗಳಲ್ಲಿ ಇರುವ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿವೆ.
ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಮತ್ತೆ ಮತ್ತೆ ಮಾಡಿಕೊಂಡ ಮನವಿಯನ್ನು ಒಪೆಕ್ (ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರ ದೇಶಗಳು) ಒಕ್ಕೂಟವು ತಿರಸ್ಕರಿಸಿದ ನಂತರದಲ್ಲಿ ಅಮೆರಿಕ, ಭಾರತ ಮತ್ತು ಇತರ ದೇಶಗಳು ಈ ಕ್ರಮಕ್ಕೆ ಮುಂದಾಗಿವೆ.
ಮಾರುಕಟ್ಟೆಯ ಅಸಮತೋಲನ ನಿವಾರಿಸಲು ಮತ್ತು ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡಲು ಸಂಗ್ರಹಾಗಾರದ ತೈಲ ಬಳಕೆ ಬಳಕೆ ಮಾಡಲು ಅಧ್ಯಕ್ಷ ಜೋ ಬೈಡನ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಇಂಧನ ಕಾರ್ಯದರ್ಶಿ ಜೆನ್ನಿಫರ್ ಗ್ರಾನ್ಹೋಮ್ ತಿಳಿಸಿದ್ದಾರೆ.
ಜಾಗತಿಕವಾಗಿ ಇಂಧನ ಬೇಡಿಕೆ ಹೆಚ್ಚಾಗಿದ್ದರಿಂದ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಕಚ್ಚಾ ತೈಲ ದರವು ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲಪಿತ್ತು. ಬ್ಯಾರಲ್‌ಗೆ 86 ಡಾಲರ್‌ಗಳನ್ನೂ ಮೀರಿತ್ತು. ಆದರೆ, ಸಂಗ್ರಹಾಗಾರದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಅಮೆರಿಕದ ನಿರ್ಧಾರ ಮತ್ತು ಕೊರೊನಾದ ಹೊಸ ತಳಿ ಓಮೈಕ್ರಾನ್‌ನಿಂದ ಸೃಷ್ಟಿಯಾಗಿರುವ ಆತಂಕದಿಂದಾಗಿ ಕಚ್ಚಾ ತೈಲ ದರವು ಶೇ 13ರಷ್ಟು ಇಳಿಕೆ ಕಂಡಿದೆ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಬ್ರೆಂಟ್ ತೈಲ ದರವು ಬ್ಯಾರಲ್‌ಗೆ 75.15 ಡಾಲರ್‌ಗಳಷ್ಟು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.